ವೀರಾಜಪೇಟೆ, ನ. ೧೪: ತಾಲೂಕು ಕೇಂದ್ರವಾಗಿರುವ ವೀರಾಜಪೇಟೆ ಪಟ್ಟಣದೊಳಗೆ ಕೋಣನೂರು-ಮಾಕುಟ್ಟದ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಪಟ್ಟಣ ಪಂಚಾಯಿತಿಯಾಗಿದ್ದ ವೀರಾಜಪೇಟೆ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಇಲ್ಲಿನ ರಸ್ತೆಗಳ ಸ್ಥಿತಿ ಅಧೋಗತಿಗೆ ತಲುಪಿದೆ.

ಗ್ರಾಮೀಣ ಪ್ರದೇಶಗಳಿಂದ ವೀರಾಜಪೇಟೆಗೆ ಪ್ರತಿನಿತ್ಯ ಬರುವ ವಾಹನಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಪ್ರತೀ ಬುಧವಾರ ನಡೆಯುವ ವಾರದ ಸಂತೆಯಲ್ಲಿ ವಾಹನಗಳ ಭರಾಟೆಯ ನಡುವೆ ಪಾದಚಾರಿಗಳ ಓಡಾಟ ಕಷ್ಟಕರ ವಾಗಿದೆ. ಹಲವೆಡೆ ನೂತನ ರಸ್ತೆಗೆ ಭೂಮಿ ಪೂಜೆ ನಡೆಸಲಾಗುತಿದ್ದರೂ; ಇರುವ ರಸ್ತೆಗಳೇ ಸಂಪೂರ್ಣ ಕಿತ್ತು ಹೋಗಿ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಅಣಕಿಸುವಂತಿದೆ.

ವೀರಾಜಪೇಟೆಯಿಂದ ಮಾಕುಟ್ಟಕ್ಕೆ ತೆರಳುವ ಮೀನುಪೇಟೆ ರಸ್ತೆ, ಮೊಗರಗಲ್ಲಿಗೆ ತೆರಳುವ ಕಾವೇರಿ ಕಲ್ಯಾಣ ಮಂಟಪ ರಸ್ತೆ, ದೇವಾಂಗಬೀದಿ, ವಿಜಯನಗರ ರಸ್ತೆ, ಸುಂಕದಕಟ್ಟೆ, ವೀರಾಜಪೇಟೆಯಿಂದ ಸಿದ್ದಾಪುರಕ್ಕೆ ತೆರಳುವ ರಸ್ತೆ, ಚರ್ಚ್ ರೋಡ್, ಗಾಂಧಿನಗರ ರಸ್ತೆ, ಸೇರಿದಂತೆ ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳೇ ಹೊಂಡಮಯವಾಗಿ ನಡೆದಾಡಲು ಯೋಗ್ಯವಲ್ಲದ ಹಂತಕ್ಕೆ ತಲುಪಿದೆ.

ಗುಂಡಿಗಳಿAದ ತುಂಬಿ ಹೋಗಿರುವ ರಸ್ತೆಯಲ್ಲಿ ವಾಹನ ಚಲಾಯಿಸಲು ವಾಹನ ಚಾಲಕರು, ಆಟೋ ಚಾಲಕರು ಹಿಂದೇಟು ಹಾಕುತ್ತಾರೆ. ದುಪ್ಪಟ್ಟು ಹಣ ತೆತ್ತು ತೆರಳುವ ಅನಿವಾರ್ಯತೆಯಿದೆ. ನಡೆದಾಡಲು ಕೂಡ ಯೋಗ್ಯವಲ್ಲದ ಸ್ಥಿತಿಯಲ್ಲಿ ರಸ್ತೆಗಳು ಕಂಡುಬರುತ್ತಿವೆ.

ಕೆಲವೆಡೆ ರಸ್ತೆಗಳು ಕಿತ್ತು ಹೋಗಿದ್ದರೆ ಇನ್ನೂ ಕೆಲವೆಡೆ ರಸ್ತೆ ಬದಿ ಇಕ್ಕೆಲಗಳು ಕಿತ್ತುಹೋಗಿವೆ. ಚರಂಡಿಯAತೂ ಗಿಡಗಂಟಿ, ಕಲ್ಲುಮಣ್ಣುಗಳಿಂದ ತುಂಬಿಕೊAಡು ಕಾಣೆಯಾಗಿದೆ. ಮಳೆ ಬಂದರೆ ನೀರೆಲ್ಲ ರಸ್ತೆ ಮೇಲೆ ಹರಿದು ಕೆರೆ ನಿರ್ಮಾಣವಾಗುತ್ತದೆ. ರಾತ್ರಿ ವೇಳೆ ಸಂಚರಿಸಲು ಸಾಧ್ಯವೇ ಇಲ್ಲ ಎಂಬAತಹ ಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ. ರಸ್ತೆ ಕಾಮಗಾರಿ ನಡೆಸಬೇಕೆನ್ನು ವಷ್ಟರಲ್ಲಿ ಕೊಡಗಿನಲ್ಲಿ ಮಳೆ ಕಾಣಿಸಿಕೊಳ್ಳುತ್ತದೆ,

(ಮೊದಲ ಪುಟದಿಂದ) ಮಳೆ ಬಿಡುವು ನೀಡುವ ಪರಿ ಸದ್ಯಕ್ಕಂತೂ ಕಂಡುಬರುತ್ತಿಲ್ಲ, ಹಾಗಾಗಿ ರಸ್ತೆ ಕಾಮಗಾರಿಯೂ ಮಳೆಯಂತೆ ನೀರಾಗಿ ಹೋಗಬಹುದೇನೋ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.

ವೀರಾಜಪೇಟೆಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದ್ದ ವೇಳೆ ಅಗಲೀಕರಣಕ್ಕೆ ಪಟ್ಟಣದ ಹೆದ್ದಾರಿಯ ಇಕ್ಕೆಲಗಳ ಜನತೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿ, ಸಾಕಷ್ಟು ಜನ ಮನೆ ಕಳೆದುಕೊಳ್ಳುವ ಭೀತಿಯಿಂದ ಹಲವರು ಕೋರ್ಟ್ ಮೊರೆ ಹೋದ ಕಾರಣ ಕಾಮಗಾರಿ ನಡೆದಿಲ್ಲ.

ವಾಹನಗಳ ಸಂದಣಿ ಹೆಚ್ಚಿದಂತೆ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವುದು ಸಂಬAಧಪಟ್ಟ ಇಲಾಖೆಗಳ ಕರ್ತವ್ಯವೇ ಆಗಿದ್ದರೂ ಇಲ್ಲಿ ಪಟ್ಟಣಕ್ಕೆ ಅಂಟಿಕೊAಡೇ ಇರುವ ಮಲೆತಿರಿಕೆ ಬೆಟ್ಟ ಕುಸಿಯುವ ಭೀತಿ ರಸ್ತೆ ವಿಸ್ತರಣೆಗೆ ಅಡಚಣೆಯಾಗಿದೆ. ರಸ್ತೆ ವಿಸ್ತರಣೆ ಆದರೆ ನೂರಾರು ಜನರಿಗೆ ಅನಾನುಕೂಲ ಆಗಬಹುದು ಆದರೆ ಸಾವಿರಾರು ಜನರಿಗೆ ಅದರಿಂದ ಅನುಕೂಲವಾಗುತ್ತದೆ ಎಂಬುದನ್ನು ಸಂಬAಧಿಸಿದವರು ಚಿಂತಿಸಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೈ.ಎಸ್. ಸಿದ್ದೆಗೌಡ ಹೆದ್ದಾರಿ ವಿಸ್ತರಣೆಯನ್ನು ೧೯೮೭ ರಲ್ಲೇ ರೂಪಿಸಲಾಗಿತ್ತು. ಈಗ ೩೫ ವರ್ಷಗಳೇ ಉರುಳಿದೆ. ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದ್ದು, ವಿಸ್ತರಣೆ ಅನಿವಾರ್ಯ, ವಿಸ್ತರಣೆ ಮಾಡದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದ್ದು, ಸಾರ್ವಜನಿಕರು ಸ್ಪಂದಿಸಬೇಕಿದೆ ಎಂದರು.

ರಸ್ತೆಯ ಒಂದು ಭಾಗದಲ್ಲಿ ಮಲೆತಿರಿಕೆ ಬೆಟ್ಟವಿದ್ದರೆ ಮತ್ತೊಂದು ಭಾಗದಲ್ಲಿ ೧೦೦ ಅಡಿಯಷ್ಟು ಆಳದ ಪ್ರಪಾತವಿದೆ. ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿ ವೈಜ್ಞಾನಿಕ ರೂಪದಲ್ಲಿ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಬೇಕಿದೆ.

ರಸ್ತೆ ವಿಸ್ತರಣೆ ಹಾಗೂ ಇರುವ ರಸ್ತೆಯ ದುರಸ್ತಿ ಆದಾಗ ಮಾತ್ರ ವಾಣಿಜ್ಯ ವಹಿವಾಟು ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸುಗಮ ವಾಹನ ಸಂಚಾರ ಸಾಧ್ಯವಾಗಲಿದೆ. ಈಗ ಪಾರ್ಕಿಂಗ್‌ಗೆ ಸ್ಥಳವಿಲ್ಲದೆ ಪರದಾಡಬೇಕಾಗಿದ್ದು, ಅಭಿವೃದ್ದಿ ಕೆಲಸ ಆಗಬೇಕಿದೆ ಎಂಬುದು ಆಟೋ ಚಾಲಕರ ಅಭಿಪ್ರಾಯ.

ಆರ್ಜಿ, ಬೇಟೋಳಿ, ಹೆಗ್ಗಳ ರಸ್ತೆ

ವೀರಾಜಪೇಟೆಯಿಂದ ಆರ್ಜಿ ಹೆಗ್ಗಳ ಮಾರ್ಗವಾಗಿ ಕೆದಮುಳ್ಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಲವೆಡೆ ಹೊಂಡವಿದೆಯೋ, ಹೊಂಡದಲ್ಲಿ ರಸ್ತೆಯೋ ಎಂಬAತಿದೆ. ಇದರಿಂದ ಜನರಿಗೆ ಸಂಚಾರ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ರಾಜಕೀಯ ಮುಖಂಡರು ಕೂಡ ಇಲ್ಲಿ ನೆಲೆಸಿದ್ದಾರೆ. ಆದರೆ ಇವರು ರಸ್ತೆ ದುರಸ್ತಿಯ ಬಗ್ಗೆ ಯಾರೂ ತಲೆಕೆಡಿಸಿಕೊಂಡAತಿಲ್ಲ. ನೂರಾರು ವಾಹನಗಳು, ಶಾಲಾ ಮಕ್ಕಳು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ.

ವೀರಾಜಪೇಟೆ-ಮಡಿಕೇರಿ ರಸ್ತೆ

ವೀರಾಜಪೇಟೆಯಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಮಧ್ಯಭಾಗಗಳಲ್ಲೆ ಅಲ್ಲಲ್ಲಿ ಗುಂಡಿಗಳು ಕಾಣಸಿಗುತ್ತವೆ.

ರಾಜ್ಯ ಹೆದ್ದಾರಿಯೆ ಹೊಂಡಮಯ

ಕೊಣನೂರಿನಿAದ ಮಾಕುಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಬಹುತೇಕ ಗುಂಡಿಗಳಿAದ ಕೂಡಿದ್ದು, ಪ್ರತಿದಿನ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.

ಸಿದ್ದಾಪುರ ಕಾವೇರಿ ಸೇತುವೆಯಿಂದ ಅಮ್ಮತ್ತಿಯ ಕಾವಾಡಿ ಗ್ರಾಮದವರೆಗೂ ರಸ್ತೆ ಹೊಂಡಮಯವಾಗಿದ್ದು, ಪ್ರಯಾಣ ದುಸ್ತರವಾಗಿದೆ. ಸಿದ್ದಾಪುರದಿಂದ ಅಮ್ಮತ್ತಿಯವರೆಗೆ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ಹೊಂಡಮಯ ರಸ್ತೆಯಲ್ಲೇ ನಿಧಾನವಾಗಿ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಾವಾಡಿಯಿಂದ ಅಮ್ಮತ್ತಿವರೆಗೆ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಸಿದ್ದಾಪುರ-ವೀರಾಜಪೇಟೆ ರಸ್ತೆ ತೀರ ಹದಗೆಟ್ಟಿದ್ದು, ವರ್ಷಗಳು ಕಳೆದರೂ ರಸ್ತೆಯ ದುರಸ್ತಿ ಇನ್ನೂ ನಡೆದಿಲ್ಲ. ಇಂಜಲಗೆರೆ, ಆನಂದಪುರ, ಅಮ್ಮತ್ತಿ, ಕಾವಾಡಿ ಗ್ರಾಮಗಳಲ್ಲಿ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಆನಂದಪುರದಿAದ ಇಂಜಲಗೆರೆಗೆ ತೆರಳುವ ಭಾಗದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟಿದೆ.

ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆಯ ದುಸ್ಥಿತಿಯಿಂದ ಸರಕು ಸಾಗಾಟಕ್ಕೆ ಸಮಸ್ಯೆಯಾದರೆ, ಅಗತ್ಯ ಕೆಲಸಗಳಿಗೆ ತಾಲೂಕು ಕೇಂದ್ರಕ್ಕೆ ತೆರಳುವ ಗ್ರಾಮಸ್ಥರ ಗೋಳು ಹೇಳತೀರದು. ಅನಾರೋಗ್ಯ, ತಾಲೂಕು ಕಚೇರಿ ಸೇರಿದಂತೆ ಇತರೆ ಅಗತ್ಯ ಕೆಲಸಗಳಿಗೆ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಪ್ರತಿದಿನ ವೀರಾಜಪೇಟೆಗೆ ತೆರಳುತ್ತಿದ್ದು, ಸ್ವಂತ ವಾಹನದಲ್ಲಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಪಟ್ಟಣದಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸಿ ಬಸ್ಸ್ನಲ್ಲಿ ಪ್ರಯಾಣಿಸುತ್ತಿದ್ದಾರೆ. ಆಟೋ ರಿಕ್ಷಾಗಳಿಗೆ ಹೆಚ್ಚಿನ ಬಾಡಿಗೆಯನ್ನು ನೀಡಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.

ವೀರಾಜಪೇಟೆಯಿಂದ ಕುಶಾಲನಗರ, ಹಾಸನಕ್ಕೆ ತೆರಳಲು ಸಿದ್ದಾಪುರ ಮಾರ್ಗವಾಗಿ ತೆರಳಬೇಕಾಗಿದ್ದು, ರಸ್ತೆಯ ಅವ್ಯವಸ್ಥೆಯಿಂದ ದೂರದ ಮಡಿಕೇರಿ ಮಾರ್ಗವಾಗಿ ಕುಶಾಲನಗರಕ್ಕೆ ತೆರಳುವಂತಾಗಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ನಿಲ್ಲುತ್ತಿದ್ದು, ನಿತ್ಯ ಸಂಚರಿಸುವವರಿಗೆ ಸಮಸ್ಯೆಯಾಗಿದೆ.

ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗ್ರಾಮ ಕಾರೆಕಾಡು ಜಂಕ್ಷನ್‌ನಿAದ ಪಾಲಿಬೆಟ್ಟ ಗದ್ದೆಮನೆಗೆ ತೆರಳುವ ೨೦೦ ಮೀಟರ್ ರಸ್ತೆ, ಕಾರೇಕಾಡು- ಕೈಕೇರಿ ೧.೫ ಕಿಮೀ ರಸ್ತೆ, ಕಾರೆಕಾಡು- ಜ್ಯೂಸ್ ಫ್ಯಾಕ್ಟರಿಗೆ ತೆರಳುವ ರಸ್ತೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳಾಗಿವೆ.

ರಸ್ತೆ ಕಾವiಗಾರಿ ವೇಳೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡದಿರುವುದರಿಂದ ಕಾಮಗಾರಿ ಮಾಡಿ ತಿಂಗಳು ಉರುಳುತಿದ್ದಂತೆ ಗುಂಡಿಗಳು ಬಿದ್ದು ರಸ್ತೆಗಳು ಹಾಳಾಗುತ್ತಿವೆ ಎನ್ನಲಾಗುತ್ತಿದ್ದು, ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ಮಳೆನೀರು ತುಂಬಿಕೊAಡು ದ್ವೀಪದಂತೆ ಗೋಚರಿಸುತ್ತದೆ. ಇಂತಹ ರಸ್ತೆಯಲ್ಲಿ ಒಂದು ಬಾರಿ ಸಂಚಾರ ಮಾಡಿದರೆ ಸಾಕು ವಾಹನ ದುರಸ್ಥಿಗಾಗಿ ಸಾವಿರಾರು ರೂಪಾಯಿ ಖರ್ಚಾಗುವುದು ಸಾಮಾನ್ಯವಾಗಿದೆ.

ಅಮ್ಮತ್ತಿ ಹೊಸೂರು ರಸ್ತೆ, ಕೈಕೇರಿ ರಸ್ತೆ, ಪಾಲಿಬೆಟ್ಟ ಸಂಪರ್ಕ ರಸ್ತೆ ಕಾರೆಕಾಡು ಅತ್ತೂರು ಸಂಪರ್ಕ ರಸ್ತೆಗಳು ತೀವ್ರ ರೀತಿಯಲ್ಲಿ ದುಸ್ಥಿತಿ ತಲುಪಿ ಸಂಚಾರಕ್ಕೆ ಯೋಗ್ಯವಲ್ಲದಾಗಿದೆ. ತುರ್ತು ಪರಿಸ್ಥಿತಿಯಲ್ಲಿ, ದಿನನಿತ್ಯ ಸಂಚಾರ ಮಾಡುವ ಕಾರ್ಮಿಕರು ಮತ್ತು ಇತರರು ಆಡಳಿತ ವರ್ಗಕ್ಕೆ ಹಿಡಿ ಶಾಪ ಹಾಕಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲದೆ ಗ್ರಾಮೀಣ ಭಾಗದ ಜಿಲ್ಲಾ ಪಂಚಾಯಿತಿಗೆ ಸೇರಿದ ರಸ್ತೆಗಳೂ ಹಾಳಾಗಿವೆ. ವೀರಾಜಪೇಟೆಯಿಂದ ತೋರಕ್ಕೆ ಸಂಪರ್ಕ ಕಲ್ಪಿಸುವ ಮೂರು ರೋಡು ಜಂಕ್ಷನ್ ರಸ್ತೆ, ಕಡಂಗ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಬಾರಿಕಾಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಆರ್ಜಿ ಗ್ರಾಮದ ಕಲ್ಲುಬಾಣೆ ರಸ್ತೆ, ಕದನೂರು ಗ್ರಾಮದ ಗ್ರಾಮೀಣ ಭಾಗದ ರಸ್ತೆ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ರಸ್ತೆಗಳು, ಕುಟ್ಟಂದಿ ಬಾಡಗ ಗ್ರಾಮದ ರಸ್ತೆಗಳು ದುಸ್ಥಿತಿಗೆ ತಲುಪಿವೆ.

ಕೆಲವು ಕಡೆ ರಸ್ತೆಗಳೇ ಕಣ್ಮರೆಯಾಗಿದೆ. ಊರಿನೊಳಗಿನ ರಸ್ತೆಗಳ ಪಾಡು ಹೇಳತೀರದಾಗಿದೆ. ಅಲ್ಲಲ್ಲಿ ಗುಂಡಿಮಯವಾಗಿದ್ದು, ಮಳೆ ಬಂದರೆ ರಸ್ತೆಯೇ ಕೆರೆಯಂತಾಗುತ್ತದೆ. ಗ್ರಾಮೀಣ ಭಾಗದ ಕೆಲವು ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಅಧಿಕಾರಿ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇನ್ನೂ ಡಾಂಬರನ್ನೇ ಕಂಡಿಲ್ಲ. ಪ್ರತಿ ಗ್ರಾಮ ಗ್ರಾಮಗಳಲ್ಲಿಯೂ ರಸ್ತೆ ಕಾಮಗಾರಿ ನಡೆಸಿ ಎಂದು ಸಾರ್ವಜನಿಕರು ಬೇಡಿಕೆ ಇಡುವುದರೊಂದಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸುವುದು, ಧರಣಿ ನಡೆಸುವುದು ಹೀಗೆ ಹಲವಾರು ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ನಡೆಯುತ್ತಲೇ ಇದ್ದರೂ ಸಂಬAಧಿಸಿದವರು ಇನ್ನೂ ಎಚ್ಚೆತ್ತುಕೊಂಡಿಲ್ಲ. -ಈಶಾನ್ವಿ