ಗೋಣಿಕೊಪ್ಪಲು, ನ. ೧೪: ಗೋಣಿಕೊಪ್ಪಲುವಿನ ಕಾಲ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ನಿಹಾಲ್ ಬಿದ್ದಪ್ಪ ಆತ್ಮಹತ್ಯೆಗೊಂಡು ತಿಂಗಳು ಕಳೆದರೂ ಅವರ ಪೋಷಕರನ್ನು ಮಾತನಾಡಿಸುವ ಸೌಜನ್ಯವನ್ನು ವಿದ್ಯಾಸಂಸ್ಥೆ ತೋರಿಲ್ಲ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಬಿವಿಪಿ ವತಿಯಿಂದ ಸಂಸ್ಥೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಎಬಿವಿಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತೀಕ್ ಪರಿವಾರ ಮುಂದಾಳತ್ವದಲ್ಲಿ ಹಲವು ವಿದ್ಯಾರ್ಥಿಗಳು ಸಮೀಪದ ಕಾಲೇಜು ಆವರಣದಿಂದ ಮೆರವಣಿಗೆಯಲ್ಲಿ ಹೊರಟು ಕಾಲ್ಸ್ ಸಂಸ್ಥೆಯ ಮುಂಭಾಗದಲ್ಲಿ ಜಮಾವಣೆಗೊಂಡು ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಮೃತ ವಿದ್ಯಾರ್ಥಿ ನಿಹಾಲ್ ಬಿದ್ದಪ್ಪನವರ ಪೋಷಕರ ಕುಂದು ಕೊರತೆಗಳನ್ನು ಪರಿಹರಿಸಲು ಕಾಲ್ಸ್ ಆಡಳಿತ ಮಂಡಳಿಗೆ ವಕೀಲರು ನೋಟಿಸು ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದರು. ೭ ದಿನಗಳೊಳಗಾಗಿ ಪೋಷಕರ ಸಮಸ್ಯೆಯನ್ನು ಆಲಿಸಲು ವಿಫಲವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ವಿದ್ಯಾಸಂಸ್ಥೆ ಪ್ರಮುಖರಿಗೆ ಮನವಿ ಪತ್ರ ಸಲ್ಲಿಸಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್ ಮುಂದಾಳತ್ವದಲ್ಲಿ ಪೊಲೀಸರು ವಿದ್ಯಾಸಂಸ್ಥೆಯ ಹೊರ ಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಎಬಿವಿಪಿಯ ಹಲವು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.