ಮಡಿಕೇರಿ, ನ. ೧೪: ಕನ್ನಡ ಸಾಹಿತ್ಯ ಪರಿಷತ್ ಸಂಪಾಜೆ ಹೋಬಳಿ ಘಟಕದ ಆಶ್ರಯದಲ್ಲಿ ಸಂಪಾಜೆ ಲಯನ್ಸ್ ಕ್ಲಬ್, ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದೊಂದಿಗೆ ಸಂಪಾಜೆ ಗೇಟಿನ ಬಳಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು.ನಿವೃತ್ತ ಶಿಕ್ಷಕ ವೆಂಕಪ್ಪ ಕಡಂಬಡ್ಕ ಅವರು ಧ್ವಜಾರೋಹಣ ಕಾರ್ಯ ನೆರವೇರಿಸಿ ಕನ್ನಡ ಭಾಷೆ, ಕನ್ನಡ ನಾಡು ಸಂಸ್ಕೃತಿ ಮತ್ತು ಕನ್ನಡದ ಹಿರಿಯ ಕವಿಗಳನ್ನು ನೆನಪಿಸಿ ಮಾತನಾಡಿದರು.

ಧ್ವಜಾರೋಹಣ ಕಾರ್ಯಕ್ರಮ ನಡೆದ ಬಳಿಕ ಸಭಾ ಕಾರ್ಯಕ್ರಮ ವನ್ನು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಗೋಪಾಲ ಪೆರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕಸಾಪ ಅಧ್ಯಕ್ಷ ನವೀನ್ ಅಂಬೆಕಲ್ಲು, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಭರತ್, ಲಯನ್ಸ್ ಕ್ಲಬ್ ಸಂಪಾಜೆ ಅಧ್ಯಕ್ಷೆ ನಳಿನಿ ಕಿಶೋರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ ಪಡ್ಪು, ಮುಖ್ಯ ಶಿಕ್ಷಕಿ ಸಾವಿತ್ರಿ ಹಾಜರಿದ್ದರು,

ನಾಡಗೀತೆಯೊಂದಿಗೆ ಕಾರ್ಯ ಕ್ರಮವನ್ನು ಆರಂಭಿಸಲಾಯಿತು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗೋಪಾಲ ಪೆರಾಜೆ ಅವರು ಮಾತನಾಡಿ, ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ವನ್ನು ಬೆಳೆಸುವುದರ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯ. ಶಾಲೆಗಳಲ್ಲಿ ಗ್ರಂಥ ಭಂಡಾರಗಳ ಸದುಪಯೋಗ ದೊಂದಿಗೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಶಿಕ್ಷಕರು ಬೆಳೆಸಬೇಕು ಎಂದರು.

ಸಭೆಯಲ್ಲಿ ಮೊದಲಿಗೆ ಕೊಯನಾಡು ಶಾಲಾ ಶಿಕ್ಷಕ ಶ್ರೀನಿವಾಸ ಅವರು ಕರ್ನಾಟಕ ರಾಜ್ಯ ರೂಪುಗೊಂಡ ಬಗೆಗಿನ ಚರಿತ್ರೆ ಅದರ ಕಾರಣಕರ್ತರ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಅನಂತ ಊರುಬೈಲು, ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಶ್ರೀಕುಮಾರ್ ಚಿದಗಲ್, ಯಶ್ವಂತ ದೇವರಗುಂಡ, ಯತೀಶ್ ಹನಿಯಡ್ಕ, ದೇವಪ್ಪ ಕೆ.ಕೆ., ಲಯನ್ಸ್ ಕ್ಲಬ್‌ನ ಕಿಶೋರ್ ಕುಮಾರ್, ಪ್ರಶಾಂತ್, ಶಿಕ್ಷಕ ಕಿಶೋರ್, ಕಸಾಪ ಗೌರವ ಕಾರ್ಯದರ್ಶಿ ಸಂಗೀತ ರವಿರಾಜ್, ಖಜಾಂಚಿ ಟೀನಾ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.

ವಿದ್ಯಾರ್ಥಿಗಳಿಗಾಗಿ ‘ಕನ್ನಡ ಭಾವಗೀತೆ’ ಮತ್ತು ‘ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆ’ ಬಗ್ಗೆ ಹಾಡು ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ವಿಜೇತ ಮಕ್ಕಳಿಗೆ ಅತಿಥಿಗಳಿಂದ ಬಹುಮಾನವನ್ನು ವಿತರಿಸಲಾಯಿತು.

ಸೇರಿದ ಎಲ್ಲರಿಗೂ ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ಸಿಹಿ ತಿಂಡಿಯನ್ನು ವಿತರಿಸಲಾಯಿತು. ಸಭೆಯ ಆರಂಭದಲ್ಲಿ ಎಲ್ಲರನ್ನೂ ಕಸಾಪ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಜಗದೀಶ್ ಕುಂಬಳಚೇರಿ ಸ್ವಾಗತಿಸಿದರೆ, ಶಿಕ್ಷಕರಾದ ವಿಶ್ವನಾಥ್ ವಂದಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಶಿಕ್ಷಕ ಚೇತನ್ ನಡೆಸಿಕೊಟ್ಟರು.