ಮಡಿಕೇರಿ, ನ. ೧೪: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಫ್ ಮತ್ತು ಕಲಾ ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಪಿ.ಎ.ಬಶೀರ್ ಆಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ದಫ್ ಮತ್ತು ಕಲಾ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ. ಪ್ರಾಚೀನ ಕಾಲದಿಂದ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಜೀವನ ಮಾಡುತ್ತಾ ಬಂದಿದ್ದು, ಇತರ ಸಹೋದರ ಸಮುದಾಯದವರೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಸಲ್ಮಾನರ ದಫ್ ಮುಟ್ಟು ಮತ್ತು ಕೋಲು ಕಳಿ ಎಂಬ ಸಾಂಸ್ಕೃತಿಕ ಕಲೆ ಕಣ್ಮರೆಯಾಗುತ್ತಿದ್ದು, ಸಮುದಾಯದ ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಒಕ್ಕೂಟ ರಚನೆ ಮಾಡಿರುವದಾಗಿ ಹೇಳಿದರು.

ಯುವಕರು ಸರಿಯಾದ ಮಾರ್ಗದರ್ಶನವಿಲ್ಲದೆ ಮಾದಕ ವಸ್ತುಗಳ ದಾಸರಾಗುತ್ತಿರುವದನ್ನು ತಡೆಗಟ್ಟಲು ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರತಿಯೊಂದು ಮಹಲ್‌ನಲ್ಲಿಯೂ ದಫ್ ಸಂಘವನ್ನು ಸ್ಥಾಪಿಸಲಾಗುವದು. ಶಿಕ್ಷಣವನ್ನು ಪ್ರೋತ್ಸಾಹಿಸಲು ಶಾಲೆ ತೊರೆದ ವಿದ್ಯಾರ್ಥಿ ಗಳನ್ನು ಗುರುತಿಸಿ ಮತ್ತೆ ಶಾಲೆಗೆ ಸೇರಿಸಲು ದಫ್ ಸಂಘಟನೆ ಕಾರ್ಯ ನಿರ್ವಹಿಸಲಿದೆ. ಸಮುದಾಯದ ಮತ್ತು ಸಮಾಜದ ಅಭಿವೃದ್ಧಿಗಾಗಿ ದುಡಿಯಲು ಆದ್ಯತೆ ನೀಡಲಾಗುವದೆಂದು ಬಶೀರ್ ಹೇಳಿದರು.

(ಮೊದಲ ಪುಟದಿಂದ)

ಜಿಲ್ಲಾ ಮಟ್ಟದ ಸ್ಪರ್ಧೆ

ಮುಂಬರುವ ಡಿಸೆಂಬರ್ ೩ ಮತ್ತು ೪ರಂದು ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ನಾಪೋಕ್ಲು ಸಮೀಪದ ಕುಂಜಿಲ ಪೈನರಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದೆ. ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ರೂ.೧೦೩೧೩, ದ್ವಿತೀಯ ೭೩೧೩, ತೃತೀಯ ೫೩೧೩ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವದು. ಹೆಸರು ನೋಂದಾಯಿಸಿಕೊಳ್ಳಲು ನ.೨೦ ಕೊನೆಯ ದಿನವಾಗಿದೆ. ಡಿ. ೪ರಂದು ಸಮಾರೋಪ ಸಮಾರಂಭದಲ್ಲಿ ರಿಪಾಯಿಯ ದಫ್ ರಾತೀಬ್ ಸಂಗಮ ನಡೆಯಲಿದೆ. ದಫ್ ಖಲೀಪರುಗಳಿಗೆ ಮತ್ತು ಸಮುದಾಯ ಹಾಗೂ ಸಮಾಜ ಸೇವೆ ಸಲ್ಲಿಸಿದವರನ್ನು ಸನ್ಮಾನ ಮಾಡಲಾಗುವದು ಎಂದು ಮಾಹಿತಿ ನೀಡಿದರು.

ಉಚಿತ ತರಬೇತಿ

ದಫ್ ಕಲಿಯಲು ಆಸಕ್ತಿ ಇರುವವರಿಗೆ ಉಚಿತವಾಗಿ ತರಬೇತಿ ನೀಡಲಾಗುವದು. ಆಸಕ್ತ ರಾತೀಬ್ ಸಂಘ ಮತ್ತು ಯುವಕರು ಮೊ. ೮೧೨೩೧೭೩೭೮೯, ೯೬೧೧೨೦೨೦೬೪, ೭೦೨೬೧೩೪೨೧೬ ಸಂಪರ್ಕ ಮಾಡಬಹುದೆಂದು ಹೇಳಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ರಶೀದ್, ಸಹಕಾರ್ಯದರ್ಶಿ ಎಂ.ಜಿ. ಅಬ್ದುಲ್ ಲತೀಫ್, ಸದಸ್ಯ ನಾಸಿರ್ ಇದ್ದರು.