ಮಡಿಕೇರಿ, ನ. ೧೨: ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಕ್ಷೀಣಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರತಿಕೂಲ ಪರಿಣಾಮ ಉಂಟಾಗಿ ಸಮಾಜದ ಹಿತ ಹಾಳಾಗುತ್ತದೆ. ವಕೀಲರು ಈ ದೃಷ್ಟಿಯಿಂದ ತಮ್ಮ ಕೆಲಸವನ್ನು ನಿರ್ವಹಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಕರೆ ನೀಡಿದರು.
ನಗರದ ಹೊರವಲಯದ ವಿದ್ಯಾನಗರದಲ್ಲಿ ರೂ. ೩೯ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಾಲಯ ಕಾಲಘಟ್ಟಕ್ಕೆ ತಕ್ಕಂತೆ ಮೇಲ್ದರ್ಜೆಗೇರುತ್ತದೆ. ಇದರಿಂದ ವಿವಾದಗಳು, ವ್ಯಾಜ್ಯಗಳು ಉಂಟಾಗಬೇಕೆAಬುದು ಉದ್ದೇಶವಲ್ಲ. ತಮಗಾದ ಅನ್ಯಾಯಕ್ಕೆ ನ್ಯಾಯಾಂಗ ವ್ಯವಸ್ಥೆಯಿಂದ ಮಾತ್ರ ತಾರ್ಕಿಕ ಅಂತ್ಯ ದೊರೆಯುತ್ತದೆ ಎಂಬ ವಿಶ್ವಾಸ ಜನರಿಗಿದೆ. ನ್ಯಾಯಾಂಗದ ಮೇಲೆ ಜನರಿಗೆ ಇಂದಿಗೂ ನಂಬಿಕೆ ಜೀವಂತವಾಗಿದೆ. ನ್ಯಾಯಾಲಯ, ವಕೀಲರ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗದಂತೆ ಎಚ್ಚರಿಕೆಯಿಂದ ಪ್ರತಿಯೊಬ್ಬರು ಕೆಲಸ ಮಾಡಿದರೆ ಸದೃಢ ಹಾಗೂ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಕೊಡಗು ಸೈನಿಕರ ನಾಡು, ವಿವಿಧ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಜಿಲ್ಲೆಯಾಗಿದೆ. ಅದೇ ರೀತಿ ನ್ಯಾಯಾಂಗ ವ್ಯವಸ್ಥೆಗೂ ಉತ್ತಮ ನ್ಯಾಯವಾದಿಗಳನ್ನು ಜಿಲ್ಲೆ ನೀಡಿದೆ. ಸಾಮಾನ್ಯ ಜನರು ಕಾನೂನಿನ ಬಗ್ಗೆ ಅರಿತುಕೊಂಡರೆ ಸಮಾಜಘಾತುಕ ಕೃತ್ಯಗಳು ಸಂಭವಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಬೋಪಣ್ಣ ಅವರು, ನ್ಯಾಯ ಅಪೇಕ್ಷಿಸಿ ನ್ಯಾಯಾಲಯಕ್ಕೆ ಬರುವವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಹೊಣೆಗಾರಿಕೆಯೂ ಸರಕಾರದ್ದಾಗಿದೆ. ಜಿಲ್ಲೆಯಲ್ಲಿ ಉತ್ತಮ ನ್ಯಾಯಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ಶಾಸಕರಿಗೆ, ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು. ಈ ಹಿಂದೆ ರಾಜ್ಯ ಹೈಕೋರ್ಟ್ ನ್ಯಾಯಾಧೀಶನಾಗಿದ್ದ ಸಂದರ್ಭ ಕೂಡ ಸರಕಾರದಿಂದ ತಮ್ಮ ಬೇಡಿಕೆಗೆ ಉತ್ತಮ ಸ್ಪಂದನ ದೊರೆ ಯುತಿತ್ತು ಎಂದು ಕಾರ್ಯಕ್ರಮದಲ್ಲಿ ಸ್ಮರಿಸಿದರು.
ಕೊಡಗಿನ ಕೊಡುಗೆ ಅಪಾರ - ಪ್ರಸನ್ನ ಬಿ. ವರಲೆ
ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಕೊಡವ ಭಾಷೆಯ ‘ಬಾಳೋಪಾಟ್’ ಹೇಳುವ ಮೂಲಕ ತಮ್ಮ ಅಧ್ಯಕ್ಷತೆ ನುಡಿಗಳನ್ನು ಆರಂಭಿಸಿದರು. ಕೊಡಗಿನ ಕಾವೇರಿ
(ಮೊದಲ ಪುಟದಿಂದ) ದಕ್ಷಿಣ ಭಾರತದ ಜೀವನಾಡಿ. ಸೇನೆಗೆ ಜಿಲ್ಲೆ ಹೆಸರುವಾಸಿಯಾಗಿದ್ದು, ಜನರಲ್ ತಿಮ್ಮಯ್ಯ, ಫೀ.ಮಾ. ಕಾರ್ಯಪ್ಪ ದೇಶದ ಆಸ್ತಿ ಎಂದು ಬಣ್ಣಿಸಿದರು. ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಪಂಚದ ಗಮನ ಸೆಳೆದಿರುವ ಪುಟ್ಟ ಜಿಲ್ಲೆ ಕೊಡಗು ದೇಶದ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಹೆಮ್ಮೆಯ ಪ್ರತೀಕ. ಲೋಕ ಅದಾಲತ್ ಮೂಲಕ ಜಿಲ್ಲೆಯಲ್ಲಿ ೨ ಸಾವಿರ ೩೯ ಪ್ರಕರಣ ಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯ ದೇವಾಲಯಕ್ಕೆ ಸಮ. ಜನರ ಕಣ್ಣೀರೊರೆಸುವ ಕೆಲಸ ನಮ್ಮಿಂದಾಗಬೇಕು. ನ್ಯಾಯ ದೊರಕಬೇಕಾದವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ ಎಂದು ಒತ್ತಿ ಹೇಳಿದರು.
ಹೈಕೋರ್ಟ್ ನ್ಯಾಯಾಧೀಶ ಚೆಪ್ಪುಡೀರ ಪೂಣಚ್ಚ ಮಾತನಾಡಿ, ನ್ಯಾಯಾಂಗಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಅದನ್ನು ಅರಿತು ವಕೀಲರು ಜನಪರವಾಗಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಸರ್ವೋಚ್ಛ ನ್ಯಾಯಾಲಯದ ಮತ್ತೋರ್ವ ನ್ಯಾಯಾಧೀಶರಾದ ಎಂ. ಈ. ಶುಕುರೆ ಕಮಲ್ ಮಾತನಾಡಿ, ನ್ಯಾಯಾಲಯಕ್ಕೆ ನ್ಯಾಯಕ್ಕೆಂದು ಬರುವವರು ನ್ಯಾಯ ಪಡೆದು ಹೊರಹೋಗಬೇಕು. ಅಂತಹ ವಾತಾವರಣವನ್ನು ನಾವುಗಳು ಸೃಷ್ಟಿಸಬೇಕು. ಕೊಡಗು ಜಿಲ್ಲೆಯಲ್ಲಿ ಪರಿಸರ ಸಂಬAಧದ ವ್ಯಾಜ್ಯಗಳು ಹೆಚ್ಚಾಗಿ ದಾಖಲಾಗುತ್ತಿವೆ. ಈ ಬಗೆಗಿನ ವಿವಾದ ಬಗೆಹರಿದು ಜಿಲ್ಲೆ ಅಭಿವೃದ್ಧಿ ಸಾಧಿಸಬೇಕು. ಪ್ರಾಕೃತಿಕ ವಿಕೋಪದಿಂದ ಸೌಲಭ್ಯ ವಂಚಿತವಾಗಿರುವ ಕೊಡಗಿಗೆ ಮುಂದಿನ ದಿನಗಳಲ್ಲಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನ ನೀಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಸ್ ವ್ಯವಸ್ಥೆ - ರಸ್ತೆ ಅಗಲೀಕರಣಕ್ಕೆ ಪ್ರಾಶಸ್ತö್ಯ
ನ್ಯಾಯಾಲಯಕ್ಕೆ ಬರಲು ಬಸ್ ವ್ಯವಸ್ಥೆ ಹಾಗೂ ಅದಕ್ಕೆ ಪೂರಕವಾಗಿ ರಸ್ತೆ ಅಗಲೀಕರಣಕ್ಕೆ ಪ್ರಾಶಸ್ತö್ಯ ನೀಡಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದರು.
ಲೋಕ ಅದಾಲತ್ ಮೂಲಕ ಹಲವು ವರ್ಷಗಳಿಂದ ವಿವಾದವಾಗಿದ್ದ ಹಲವು ಪ್ರಕರಣಗಳು ಇತ್ಯರ್ಥವಾಗಿವೆ. ಕುಶಾಲನಗರದಲ್ಲಿ ನೂತನ ನ್ಯಾಯಾಲಯ ನಿರ್ಮಾಣ ಸಂಬAಧ ಟೆಂಡರ್ ಹಂತದಲ್ಲಿದೆ ಎಂದು ವಿವರಿಸಿದರು.
ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಗೆ ನ್ಯಾಯಾಲಯದ ಅಗತ್ಯತೆ ಇತ್ತು. ನ್ಯಾಯಾಲಯ ನಿರ್ಮಾಣವಾಗಿರುವ ಜಾಗವನ್ನು ಈ ಹಿಂದೆ ಜಿಲ್ಲಾಡಳಿತ ಭವನಕ್ಕೆಂದು ಮೀಸಲಿಡಲಾಗಿತ್ತು. ಬಳಿಕ ಇದನ್ನು ನಾನಾ ಕಾರಣಕ್ಕೆ ನ್ಯಾಯಾಲಯ ನಿರ್ಮಾಣಕ್ಕೆಂದು ನೀಡಲಾಯಿತು. ಮಡಿಕೇರಿಯ ನ್ಯಾಯಾಲಯ ಎಲ್ಲಾ ವ್ಯವಸ್ಥೆ ಹೊಂದಿರುವ ರಾಜ್ಯದ ಮೊದಲು ಕೋರ್ಟ್ ಎಂಬುದು ಕೊಡಗಿಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಾರತ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಕಾರ್ಯಾಂಗ, ಶಾಸಕಾಂಗ ಹಾದಿತಪ್ಪಿದರೆ ಅದನ್ನು ಎಚ್ಚರಿಸುವುದು ನ್ಯಾಯಾಂಗ ವ್ಯವಸ್ಥೆ ಮಾತ್ರ. ನ್ಯಾಯಾಲಯದ ಮೇಲೆ ಜನರಿಗೆ ಭರವಸೆ ಇದೆ ಎಂದರು.
ವಿದ್ಯಾನಗರ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯ್ತಿ ಭವನ ಕೂಡ ಇದ್ದು, ನ್ಯಾಯಾಲಯ ನಿರ್ಮಾಣವಾಗಿ ರುವುದರಿಂದ ಬಸ್ನ ವ್ಯವಸ್ಥೆ ಬೇಕಿದೆ. ಈ ಬಗ್ಗೆ ಕ್ರಮವಹಿಸ ಲಾಗುವುದು ಎಂದು ನುಡಿದರು.
ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲೆಯ ಆಡಳಿತ ವಿಭಾಗದ ನ್ಯಾಯಾಧೀಶರಾಗಿರುವ ಇ.ಎಸ್. ಇಂದ್ರೇಶ್ ಮಾತನಾಡಿ, ನೂತನ ನ್ಯಾಯಾಲಯ ಸುಸಜ್ಜಿತವಾಗಿದೆ.
ವಿಶೇಷ ಚೇತನರಿಗೆ ಅನುಕೂಲ ಹಾಗೂ ಮಕ್ಕಳ ಸ್ನೇಹಿ ನ್ಯಾಯಾಲಯ ಇದಾಗಿದೆ ಎಂದ ಅವರು, ಕೊಡಗಿನವರೇ ಆಗಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ.ಎಸ್. ಬೋಪಣ್ಣ ಅವರು ಎಲ್ಲರಿಗೆ ಮಾದರಿ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ೯ ಕೋರ್ಟ್ ಹಾಲ್, ಸ್ಟಾçಂಗ್ ರೂಂ, ರೆಕಾರ್ಡ್ ರೂಂ, ಮಕ್ಕಳ ಪರಿವೀಕ್ಷಣಾ ಕೊಠಡಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ನೂತನ ನ್ಯಾಯಾಲಯ ಸಂಕೀರ್ಣದಲ್ಲಿವೆ.
ಮುAದಿನ ಹಂತದಲ್ಲಿ ವಕೀಲರ ಸಂಘದ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದ ಅವರು, ನ್ಯಾಯಾಲಯ ನಿರ್ಮಾಣ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹೈಕೋರ್ಟ್ನ ರಿಜಿಸ್ಟಾçರ್ ಮುರುಳೀದರ್ ಪೈ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಹೈಕೋರ್ಟ್ ರಿಜಿಸ್ಟಾçರ್ (ವಿಜಿಲೆನ್ಸ್) ಕೊಡಗು ಜಿಲ್ಲೆಯ ಕೆ.ಎಸ್. ಭರತ್ ಕುಮಾರ್, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ, ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಹೈಕೋರ್ಟ್ ಅಡ್ವೊಕೇಟ್ ಜನರಲ್ ದ್ಯಾನ್ ಚಿಣ್ಣಪ್ಪ, ಮಾಜಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ಹೈಕೋರ್ಟ್ ವಕೀಲ ಚಂದ್ರಮೌಳಿ, ಎಂ.ಟಿ. ನಾಣಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸತ್ರ ಮತ್ತು ಸಿವಿಲ್ ನ್ಯಾಯಾಧೀಶರಾದ ಎಂ. ಭೃಂಗೇಶ್ ಸ್ವಾಗತಿಸಿ, ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್ ವಂದಿಸಿದರು.