ಸಿದ್ದಾಪುರ, ನ. ೧೨: ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಕನಿಷ್ಟ ಕೂಲಿ ವ್ಯಾಪ್ತಿಗೆ ಒಳಪಡಿಸುವಂತೆ ಎ.ಐ.ಟಿ.ಯು.ಸಿ. ರಾಜ್ಯಾಧ್ಯಕ್ಷ ಬಿ. ಅಂಜಾದ್ ಸರಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ಗೌರವಧನ ರೂಪದಲ್ಲಿ ನೀಡುತ್ತಿರುವುದನ್ನು ನಿಲ್ಲಿಸಿ ಮಾಸಿಕ ರೂ. ೩೧ ಸಾವಿರ ವೇತನವನ್ನು ನೀಡಬೇಕು ಹಾಗೂ ರಾಷ್ಟಿçÃಯ ಶಿಕ್ಷಣ ನೀತಿಯ ಹೆಸರಿನಲ್ಲಿ ಅಂಗನವಾಡಿ ವ್ಯವಸ್ಥೆಯನ್ನು ಖಾಸಾಗಿ ಅವರಿಗೆ ನೀಡುವ ಹುನ್ನಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಅವರು ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಕರಿಗೆ ಮಾಸಿಕ ರೂ. ೨,೫೦೦ ಗೌರವ ಧನ ನೀಡಿ ದುಡಿಸಿಕೊಳ್ಳುತ್ತಿದ್ದು ಇವರನ್ನು ಕನಿಷ್ಟ ವೇತನ ನೀಡುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ಸಂಘಟಿಸುವ ಕಾರ್ಯ ಎಐಟಿಯುಸಿ ಕಾರ್ಮಿಕ ಸಂಘಟನೆ ಕೊಡಗು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದಾಗಿ ಮಾಹಿತಿ ನೀಡಿದರು.

ಈ ಸಂದರ್ಭ ಮುಂದಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ನಡೆಸುವುದಾಗಿ ಮಾಹಿತಿ ನೀಡಿದರು. ಈ ಸಂದರ್ಭ ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಕೆ.ವಿ. ಸುನೀಲ್, ಎ.ಐ.ವೈ.ಎಫ್.ನ ರಾಜ್ಯ ಮಂಡಳಿ ಸದಸ್ಯ ರಫೀಕ್ ನವಲಗುಂದ ಹಾಜರಿದ್ದರು.