ಗೋಣಿಕೊಪ್ಪ ವರದಿ, ನ. ೧೩: ಪೊನ್ನಂಪೇಟೆ ನ್ಯಾಯಾಲಯದಲ್ಲಿ ಶಾಶ್ವತವಾಗಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪೊನ್ನಂಪೇಟೆ ವಕೀಲರ ಸಂಘವು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಮನವಿ ಮಾಡಿಕೊಂಡಿತು.
ಶುಕ್ರವಾರ ಪೊನ್ನಂಪೇಟೆ ವಕೀಲರ ಸಂಘವು ಆಯೋಜಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡೀರ ಎಂ. ಪೂಣಚ್ಚ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಪ್ರಸ್ತುತ ವಾರದ ಎರಡು ದಿನ ಮಾತ್ರ ಹಿರಿಯ ಶ್ರೇಣಿ ಕಲಾಪ ನಡೆಯುತ್ತಿದೆ. ವಾರಪೂರ್ತಿ ಶಾಶ್ವತವಾಗಿ ಕಲಾಪ ನಡೆಸಲು ಅವಕಾಶ ನೀಡಿದರೆ ಕಕ್ಷಿದಾರರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಯಿತು. ನ್ಯಾಯಾಲಯ ಕಾಂಪ್ಲೆಕ್ಸ್ ಆವರಣದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರವನ್ನು ಬೇರೆಡೆಗೆ ಸ್ಥಳಾಂತರಿಸಲು ಮನವಿ ಮಾಡಿಕೊಳ್ಳಲಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಾದೀಶ ಇ. ಎಸ್. ಇಂದ್ರೇಶ್ ಮಾತನಾಡಿ, ಪೊನ್ನಂಪೇಟೆ ನ್ಯಾಯಾಲಯ ಉತ್ತಮ ಮೂಲಭೂತ ವ್ಯವಸ್ಥೆ, ಕೋರ್ಟ್ ಹಾಲ್ ಹಾಗೂ ನ್ಯಾಯ ನೀಡಲು ಬೇಕಾದ ಎಲ್ಲ ಸೌಕರ್ಯ ಹೊಂದಿರುವುದು ಮೆಚ್ಚುವಂತಹ ವಿಚಾರ. ಇದರ ಸದುಪಯೋಗವನ್ನು ಪಡೆದುಕೊಂಡು ನ್ಯಾಯ ಕಲ್ಪಿಸುವ ಮೂಲಕ ದೇಶಕ್ಕೆ ಅರ್ಪಣೆ ಮಾಡಿಕೊಳ್ಳಬೇಕು. ವಕೀಲರ ಪಾತ್ರ ಕೂಡ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಕೀಲರು ಚಿಂತನಾಶಕ್ತಿಯನ್ನು ಹೆಚ್ಚಿಸಿಕೊಂಡು ನ್ಯಾಯಕ್ಕೆ ತಮ್ಮನ್ನು ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ. ಜಿ. ಎಸ್. ಕಮಲ್ ಮಾತನಾಡಿ, ವಕೀಲ ವೃತ್ತಿಗೆ ವಿದ್ಯಾರ್ಥಿಗಳು ಹೆಚ್ಚು ಒಲವು ತೋರುತ್ತಿದ್ದು, ಶೀಘ್ರ ನ್ಯಾಯ ಒದಗಿಸಲು ವಕೀಲರು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡೀರ ಎಂ. ಪೂಣಚ್ಚ ಸನ್ಮಾನ ಸ್ವೀಕರಿಸಿ ಮಾತನಾಡಿ, ಶೀಘ್ರ ನ್ಯಾಯ ಇತ್ಯರ್ಥ ಪಡಿಸಲು ತಂತ್ರಜ್ಞಾನದ ಸಹಾಯ ಕೂಡ ಪಡೆದುಕೊಳ್ಳಬೇಕಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಇತ್ಯರ್ಥಪಡಿಸುವುದರಿಂದ ಸಮಯ ಮತ್ತು ಶೀಘ್ರ ಇತ್ಯರ್ಥ ಆಗಲಿದೆ. ಇದು ದೇಶಕ್ಕೆ ಲಾಭ. ವಕೀಲರ ಸಂಘದ ಚಟುವಟಿಕೆಯಿಂದ ಕೂಡಿದ್ದರೆ ನ್ಯಾಯ ಒದಗಿಸಲು ಹೆಚ್ಚು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.
ಕಡಿಮೆ ಸದಸ್ಯರನ್ನು ಒಳಗೊಂಡಿರುವ ಪೊನ್ನಂಪೇಟೆ ವಕೀಲರ ಸಂಘದ ಚಟುವಟಿಕೆ, ಶೀಘ್ರ ಇತ್ಯರ್ಥಕ್ಕೆ ವಕೀಲರು ನಡೆಸುತ್ತಿರುವ ಪ್ರಯತ್ನದ ಬಗ್ಗೆ ನ್ಯಾಯಮೂರ್ತಿ ಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಪೊನ್ನಂಪೇಟೆ ಮತ್ತು ವೀರಾಜಪೇಟೆ ವಕೀಲರ ಸಂಘದ ಸದಸ್ಯರುಗಳು ಪಾಲ್ಗೊಂಡು ಶುಭ ಕೋರಿದರು.
ಪೊನ್ನಂಪೇಟೆ ವಕೀಲರ ಸಂಘದ ಕಳಕಂಡ ಡಿ. ಮುತ್ತಪ್ಪ ಮಾತನಾಡಿ, ವಕೀಲರು ಶೀಘ್ರ ಇತ್ಯರ್ಥಕ್ಕೆ ಮುತುವರ್ಜಿ ತೋರುತ್ತಿರುವುದು ಹೆಚ್ಚು ಪ್ರಕರಣ ಇತ್ಯರ್ಥಕ್ಕೆ ಕಾರಣವಾಗುತ್ತಿದೆ. ವಕೀಲರ ಇಚ್ಚಾಶಕ್ತಿ ನ್ಯಾಯದಾನ ಮಾಡಿದಂತ ಆತ್ಮತೃಪ್ತಿ ದೊರೆಯುತ್ತದೆ ಎಂದರು.
ಹಿರಿಯ ವಕೀಲ ಎಸ್. ಡಿ. ಕಾವೇರಪ್ಪ ಮಾತನಾಡಿದರು. ಕಾರ್ಯದರ್ಶಿ ಅಜ್ಜಮಾಡ ಮೋನಿ ಪೊನ್ನಪ್ಪ ವಂದಿಸಿದರು. ಕಂಜಿತAಡ ಅನಿತಾ ಸ್ವಾಗತಿಸಿದರು. ಸೂರಜ್ ಮುತ್ತಣ್ಣ ನಿರೂಪಿಸಿದರು. ನೆಲ್ಲಮಕ್ಕಡ ಪ್ರತಿಷ್ಟ ಅತಿಥಿ ಪರಿಚಯ ಮಾಡಿದರು.