ಗೋಣಿಕೊಪ್ಪಲು, ನ. ೧೩: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವು ಡಿ.೬ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ಕೊಡಗಿನಿಂದ ಸಾವಿರಾರು ಸಂಖ್ಯೆಯಲ್ಲಿ ದಲಿತ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದರು.

ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಶುರಾಮ್ ಸ್ವಾತಂತ್ರö್ಯ, ಸಮಾನತೆ,ಸಹೋದರತೆ,ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರು ವವರ ವಿರುದ್ಧ ಧ್ವನಿ ಎತ್ತಲು ರಾಜ್ಯದ ೧೨ಕ್ಕೂ ಅಧಿಕ ದಲಿತ ಸಂಘರ್ಷ ಸಮಿತಿಗಳು ಒಗ್ಗಟ್ಟಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೬ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿ.೬ರಂದು ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದು ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ದವರು ಪಾಲ್ಗೊಳ್ಳುವಂತೆ ಕರೆ ನೀಡಿದರು.

ವಿಭಾಗೀಯ ಸಂಚಾಲಕ ಕೃಷ್ಣಪ್ಪ ಬೆಳ್ಳೂರು ಮಾತನಾಡಿ ಚದುರಿ ಹೋಗಿದ್ದ ದಲಿತ ಸಂಘಟನೆಗಳು ಒಂದೇ ವೇದಿಕೆಯಡಿ ಸಾಹಿತಿ ದೇವನೂರು ಮಹಾದೇವ್‌ರವರ ಸಮ್ಮುಖದಲ್ಲಿ ಹಾಗೂ ರಾಜ್ಯದ ಹಲವು ನಾಯಕರ ಮುಂದಾಳತ್ವದಲ್ಲಿ ದಲಿತ ಸಂಘಟನೆಯ ಪದಾಧಿ ಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇದರಿಂದ ದಲಿತರಲ್ಲಿ ಒಗ್ಗಟ್ಟಿನ ಪ್ರದರ್ಶನವನ್ನು ತೋರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ವೇಳೆ ಕಾರ್ಯಕ್ರಮದ ಅಂಗವಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಎಂಬ ಕರಪತ್ರವನ್ನು ಪದಾಧಿಕಾರಿಗಳು ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಟಿ.ಎನ್. ಗೋವಿಂದಪ್ಪ, ಜಿಲ್ಲಾ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಗಳಾದ ರಜನಿಕಾಂತ್, ಕುಮಾರ್ ಮಹಾದೇವ್, ಹೆಚ್.ಇ. ಶಿವಕುಮಾರ್, ಲಕ್ಷಿö್ಮ, ಮಂಜು, ಸುಬ್ರಮಣಿ, ಮುರುಗ, ಎಸ್.ಟಿ. ಗಿರೀಶ್, ಸತೀಶ್ ಸಿಂಗಿ, ರಾಜೇಶ್, ಚಂದ್ರ, ಗಣೇಶ್, ನಿತೇಶ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಜಿಲ್ಲಾ ಸಂಘಟನಾ ಸಂಚಾಲಕರಾದ ಕುಮಾರ್ ಮಹಾದೇವ್ ಸ್ವಾಗತಿಸಿ, ರಜನಿಕಾಂತ್ ವಂದಿಸಿದರು.

- ಹೆಚ್.ಕೆ. ಜಗದೀಶ್