ತೆಲಂಗಾಣದಲ್ಲಿ ಎಲ್ಲೆಲ್ಲೂ ಕಮಲ ಅರಳಲಿದೆ: ನರೇಂದ್ರ ಮೋದಿ

ಹೈದರಾಬಾದ್, ನ. ೧೨: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಜನರಿಗೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಎಲ್ಲೆಲ್ಲೂ ಕಮಲ ಅರಳಲಿದೆ ಎಂದು ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ಹೇಳಿಕೆ ನೀಡಿದ್ದು, ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್‌ಗೆ ಸವಾಲು ಹಾಕಲು ಬಿಜೆಪಿ ಮುಂದಾಗಿದೆ. ತೆಲಂಗಾಣದಲ್ಲಿ ಅಪಾರ ನಂಬಿಕೆ ಇಟ್ಟಿರುವ ರಾಜಕೀಯ ಪಕ್ಷವು ಜನರಿಗೆ ದ್ರೋಹ ಬಗೆದಿದೆ. ಇದು ರಾಜ್ಯದಲ್ಲಿ ಕಮಲ ಅರಳಲಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಮೋದಿ ಟಿಆರ್‌ಎಸ್ ಹೆಸರು ಹೇಳದೆಯೇ ಹೇಳಿದರು. ರಾಜ್ಯದ ರಾಮಗುಂಡAನಲ್ಲಿ ರಸಗೊಬ್ಬರ ಕಾರ್ಖಾನೆಯನ್ನು ಉದ್ಘಾಟಿಸಲು ಮೋದಿ ಆಗಮಿಸಿದ್ದರು. ಜೊತೆಗೆ ಅನೇಕ ಅಭಿವೃದ್ಧಿ ಯೋಜನೆಗಳಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ಯಾವುದೇ ಉಪಚುನಾವಣೆ ನಡೆದರೂ ಸೂರ್ಯೋದಯ ದೂರವಿಲ್ಲ ಎಂಬ ಸಂದೇಶ ಸ್ಪಷ್ಟ ಮತ್ತು ಜೋರಾಗಿ ಕೇಳಿಸುತ್ತಿದೆ. ಕತ್ತಲೆ ಮಾಯವಾಗುತ್ತಿದೆ. ತೆಲಂಗಾಣದಲ್ಲಿ ಎಲ್ಲೆಲ್ಲಿಯೂ ಕಮಲ ಅರಳಲಿದೆ. ತೆಲಂಗಾಣದ ಜನತೆ ಯಾವ ಪಕ್ಷದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರೋ ಅದೇ ಪಕ್ಷ ತೆಲಂಗಾಣಕ್ಕೆ ದ್ರೋಹ ಬಗೆದಿದೆ. ಆದರೆ ಸ್ನೇಹಿತರೇ, ಕತ್ತಲು ಯಾವಾಗ ನಾಲ್ಕು ಕಡೆಯೂ ಆವರಿಸುತ್ತದೆಯೋ ಆಗ ಕಮಲ ಅರಳಲು ಆರಂಭಿಸುತ್ತದೆ ಎಂದು ಮೋದಿ ಹೇಳಿದರು.

ಅಪ್ರಾಪ್ತ ಗರ್ಭಿಣಿಗೆ ಭ್ರೂಣ ತೆಗೆಸಲು ಹೈಕೋರ್ಟ್ ಅನುಮತಿ

ಬೆಂಗಳೂರು, ನ. ೧೨: ಅತ್ಯಾಚಾರಕ್ಕೊಳಗಾದ ೧೩ ವರ್ಷದ ಬಾಲಕಿಯ ೨೫ ವಾರಗಳ ಭ್ರೂಣ ತೆಗೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದು, ಆಕೆಯ ಶಾಲಾ ಪ್ರಮಾಣಪತ್ರ ಮತ್ತು ರೇಡಿಯಾಲಜಿಸ್ಟ್ ನೀಡಿದ ಸ್ಕ್ಯಾನ್ ವರದಿಯ ಪ್ರಕಾರ ಆಕೆ ೨೫ ವಾರಗಳ ಗರ್ಭಿಣಿ ಎಂದು ಸಂತ್ರಸ್ತೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಆದೇಶವನ್ನು ನೀಡಿದರು. ಅತ್ಯಾಚಾರಕ್ಕೊಳಗಾದ ೧೩ ವರ್ಷದ ಸಂತ್ರಸ್ತೆಯ ೨೫ ವಾರಗಳ ಭ್ರೂಣ ತೆಗೆಸಲು ಹೈಕೋರ್ಟ್ ವಾಣಿವಿಲಾಸ ಆಸ್ಪತ್ರೆಯ ಸೂಪರಿಂಟೆAಡೆAಟ್‌ಗೆ ನಿರ್ದೇಶನ ನೀಡಿದೆ. ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿ ಕೋರಿ ತನ್ನ ತಾಯಿಯ ಮೂಲಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಇದೇ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ನಿರ್ದೇಶನಗಳನ್ನು ಉಲ್ಲೇಖಿಸಿದ ಸರ್ಕಾರಿ ವಕೀಲರು, ೧೯೭೧ ರ ವೈದ್ಯಕೀಯ ಗರ್ಭಪಾತ ನಿಯಮಗಳ ಪ್ರಕಾರ ಕಾರ್ಯವಿಧಾನವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಲ್ಲಿಸಿದರು. ಆಸ್ಪತ್ರೆಯ ವೈದ್ಯರು ಸಂತ್ರಸ್ತೆಯನ್ನು ಪರಿಶೀಲನೆಗೊಳಪಡಿಸಿ ಅವರ ಜೀವಕ್ಕೆ ಹಾನಿಯಾಗುವಂತಿದ್ದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಒಂದು ವೇಳೆ ವೈದ್ಯರ ನಿರ್ಧಾರದಂತೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣ ತೆಗೆಸಿದಲ್ಲಿ ತನಿಖೆಗೆ ನೆರವಾಗುವುದಕ್ಕಾಗಿ ಭ್ರೂಣದ ಡಿಎನ್‌ಎಯನ್ನು ವಿಧಿ ವಿಜ್ಞಾನ ಪ್ರಯೋಗದಲ್ಲಿ ಸಂಗ್ರಹಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

ಬೆAಗಳೂರು, ನ. ೧೨: ೧೫ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಹೆಬ್ಬಾಳದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ೫೫ ವರ್ಷದ ಶಿಕ್ಷಕ, ಹಲವು ತಿಂಗಳಿನಿAದ ಕೃತ್ಯ ಎಸಗುತ್ತಿದ್ದ. ಬಾಲಕಿಯರು ನೀಡಿದ್ದ ಮಾಹಿತಿ ಆಧರಿಸಿ ಶಾಲೆಯ ಮುಖ್ಯ ಶಿಕ್ಷಕರೇ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರದವನಾದ ಶಿಕ್ಷಕನಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಆಟ ಹಾಗೂ ಪಾಠದ ನೆಪದಲ್ಲಿ ಬಾಲಕಿಯರನ್ನು ತನ್ನ ಬಳಿ ಕರೆಸಿಕೊಳ್ಳುತ್ತಿದ್ದ ಆರೋಪಿ ವಿದ್ಯಾರ್ಥಿನಿಯರಿಗೆ ಮುತ್ತು ಕೊಡುವುದು ಹಾಗೂ ಮೈ - ಕೈ ಹಾಗೂ ಇತರೆ ಅಂಗಾAಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ೮ ಹಾಗೂ ೯ನೇ ತರಗತಿಯ ೧೫ ಬಾಲಕಿಯರಿಗೆ ಆರೋಪಿ ಕಿರುಕುಳ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೃತ್ಯಕ್ಕೆ ಸಂಬAಧಪಟ್ಟ ಪುರಾವೆಗಳನ್ನೂ ಪೊಲೀಸರು ಸಂಗ್ರಹಿಸಿದ್ದು, ತನಿಖೆ ಮುಂದುವರಿದಿದೆ.

ಐಷಾರಾಮಿ ವಾಚ್: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರೂಖ್ ಖಾನ್‌ಗೆ ತಡೆ!

ಮುಂಬೈ, ನ. ೧೨: ಐಷಾರಾಮಿ ವಾಚ್‌ಗಳನ್ನು ಹೊಂದಿದ್ದ ಕಾರಣಕ್ಕಾಗಿ ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಅವರ ತಂಡದ ೫ ಸದಸ್ಯರನ್ನು ಮುಂಬೈನ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗಳ ಕಾಲ ಸೀಮಾಸುಂಕ ಅಧಿಕಾರಿಗಳು ತಡೆದಿದ್ದರು. ಶನಿವಾರದಂದು ಬೆಳಗಿನ ಜಾವ ಪಾವತಿ ವ್ಯವಸ್ಥೆ ಚಾಲ್ತಿಯಲ್ಲಿರದ ಕಾರಣ ಶಾರೂಖ್ ಖಾನ್ ಹಾಗೂ ಅವರ ತಂಡದವರಿಗೆ ೬ ಐಷಾರಾಮಿ ವಾಚ್‌ಗಳಿಗೆ ಸೀಮಾಸುಂಕ ಪಾವತಿಸಲು ಸಾಧ್ಯವಾಗಿರಲಿಲ್ಲ ಈ ಹಿನ್ನೆಲೆಯಲ್ಲಿ ಶಾರೂಖ್ ಖಾನ್ ಹಾಗೂ ತಂಡದ ಸದಸ್ಯರನ್ನು ಒಂದು ಗಂಟೆಗಳ ಕಾಲ ತಡೆಯಲಾಗಿತ್ತು. ಈ ಘಟನೆ ಶಾರೂಖ್ ಖಾನ್ ದುಬೈ ನಿಂದ ಚಾರ್ಟೆಡ್ ಫ್ಲೈಟ್‌ನಲ್ಲಿ ಮಧ್ಯರಾತ್ರಿ ೧೨.೩೦ಕ್ಕೆ ಬಂದಿಳಿದಾಗ ನಡೆದಿದೆ. ಆ ವೇಳೆಯಲ್ಲಿ ಸಾಮಾನ್ಯ ವೈಮಾನಿಕ ಟರ್ಮಿನಲ್(ಜಿಎಟಿ)ಯಲ್ಲಿ ಪಾವತಿ ಕೌಂಟರ್ ಕಾರ್ಯಾಚರಣೆಯಲ್ಲಿರಲಿಲ್ಲ. ಶಾರೂಖ್ ಖಾನ್ ಹಾಗೂ ತಂಡದವರ ಲಗೇಜ್‌ನ್ನು ಪರಿಶೀಲಿಸುವಾಗ, ಸೀಮಾಸುಂಕದ ಮೌಲ್ಯಮಾಪನದ ಪ್ರಕಾರ ಅವರ ಬಳಿ ೧೭.೮೬ ಲಕ್ಷ ರೂಪಾಯಿ ಮೌಲ್ಯದ ೬ ಐಷಾರಾಮಿ ವಾಚ್‌ಗಳು ಪತ್ತೆಯಾಗಿದೆ. ಈ ವಾಚ್‌ಗಳಿದ್ದ ಬ್ಯಾಗ್ ಶಾರೂಖ್ ಖಾನ್ ಅವರ ಬಾಡಿ ಗಾರ್ಡ್ ರವಿ ಶಂಕರ್ ಸಿಂಗ್ ಬಳಿ ಇತ್ತು. ಕೆಲ ಹೊತ್ತಿನ ಬಳಿಕ ಖಾನ್ ಹಾಗೂ ಅವರ ಕಾರ್ಯದರ್ಶಿ ಪೂಜಾ ದಾದ್ಲಾನಿ ಹಾಗೂ ಇನ್ನೂ ಮೂವರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಲಾಯಿತು.

ರಾಜೀವ್ ಗಾಂಧಿ ಹತ್ಯೆ ಪ್ರಕರಣ : ನಳಿನಿ ಶ್ರೀಹರನ್,

ಇತರ ನಾಲ್ವರು ಅಪರಾಧಿಗಳ ಬಿಡುಗಡೆ

ಚೆನ್ನೆöÊ, ನ. ೧೨: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್, ಅವರ ಪತಿ ಮತ್ತು ಇತರ ಮೂವರು ಅಪರಾಧಿಗಳನ್ನು ಶನಿವಾರ ಸಂಜೆ ತಮಿಳುನಾಡು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ನಳಿನಿ ಶ್ರೀಹರನ್ ಇಂದು ಸಂಜೆ ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಿಂದ ಬಿಡುಗಡೆಯಾದ ತಕ್ಷಣ ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ತೆರಳಿದರು. ಅಲ್ಲಿ ಪತಿ ವಿ ಶ್ರೀಹರನ್ ಅಲಿಯಾಸ್ ಮುರುಗನ್ ಬಿಡುಗಡೆಗೊಂಡಿದ್ದು, ಆತನನ್ನು ನೋಡಿ ಭಾವುಕರಾದರು. ಶ್ರೀಲಂಕಾದ ಪ್ರಜೆಗಳಾದ ಸಂತಾನ್ ಮತ್ತು ಮುರುಗನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ ನಂತರ ರಾಜ್ಯದ ತಿರುಚಿರಾಪಳ್ಳಿಯಲ್ಲಿರುವ ವಿಶೇಷ ನಿರಾಶ್ರಿತರ ಶಿಬಿರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು. ಸುದೀರ್ಘ ಕಾನೂನು ಹೋರಾಟದ ನಂತರ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ಆದೇಶ ನೀಡಿತ್ತು. ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿತ್ತು. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.