ಗೋಣಿಕೊಪ್ಪಲು, ನ. ೧೩: ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಿತಿಮತಿ ಸಮೀಪದ ಆನೆ ಚೌಕೂರು ಬಳಿ ನಡೆದಿದೆ.
ತಿತಿಮತಿ ಆನೆಚೌಕೂರು ಗೇಟಿನಿಂದ ಕೊಡಗಿಗೆ ಸರ್ಕಾರಿ ಬಸ್ಸಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದ ಹಿಂದೂ ಸಂಘಟನೆ ಕೆಲ ಕಾರ್ಯಕರ್ತರು ಸುಮಾರು ೪೫ ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡು ಆರೋಪಿಗಳಾದ ದೇವರಪುರ ಬಳಿ ವಾಸವಿದ್ದ ಅಸ್ಸಾಂ ಮೂಲದ ಗಿಯಾಸುದ್ದೀನ್, ಶಹಜಮಾಲ್ ಎಂಬವರನ್ನು ಗೋಣಿಕೊಪ್ಪ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಎಎಸ್ಐ ಸಾಬು, ಸಿಬ್ಬಂದಿಗಳಾದ ಅನೀಫ್, ಪುನಿತ್, ದೇವೇಂದ್ರ ನಾಯಕ್, ತೇಜಸ್, ಮಹದೇವಸ್ವಾಮಿ ಆರೋಪಿಗಳ ಮೇಲೆ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಡಗಿನಲ್ಲಿ ಆಗಿಂದಾಗ್ಗೆ ಗೋಮಾಂಸ ಮಾರಾಟ ಪ್ರಕರಣ ಬೆಳಕಿಗೆ ಬರುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದಾರೆ.