ವೀರಾಜಪೇಟೆ, ನ. ೧೧: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಸಂಪರ್ಕ ರಸ್ತೆ, ಬೀದಿಗಳ ರಸ್ತೆ ದುರಸ್ತಿಗೊಳ್ಳದೆ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ ನಗರದಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರು ಉಪಯೋಗಕ್ಕೆ ಯೋಗ್ಯವಲ್ಲದಿರುವುದು ಹಾಗೂ ನಗರದ ಇತರ ಸಮಸ್ಯೆಗಳಿಗೆ ಪುರಸಭೆಯು ಸ್ಪಂದಿಸುತ್ತಿಲ್ಲ ಎಂದು ವೀರಾಜಪೇಟೆ ನಾಗರಿಕ ಸಮಿತಿ ಆರೋಪಿಸಿದೆ.
ನಾಗರಿಕ ಸಮಿತಿ ವೀರಾಜಪೇಟೆ ವತಿಯಿಂದ ನಗರದ ಗೋಣಿಕೊಪ್ಪಲು ರಸ್ತೆಯಲ್ಲಿರುವ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಡಾ. ಇ.ಆರ್. ದುರ್ಗಾ ಪ್ರಸಾದ್ ಅವರು ನಗರದಲ್ಲಿ ಯಾವುದೇ ರಸ್ತೆಗಳಲ್ಲಿ ಸಂಚಾರ ಮಾಡುವುದು ದುಸ್ಥರವಾಗಿದ್ದು, ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿವೆ. ಅಲ್ಲದೆ ಹೊರ ಗ್ರಾಮ, ಜಿಲ್ಲೆ, ರಾಜ್ಯಗಳಿಂದ ಪ್ರಯಾಣಿಕರು ಆಗಮಿಸಿದಲ್ಲಿ ಬೃಹತ್ ಗುಂಡಿಗಳ ದರ್ಶನವಾಗುತ್ತದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸಿ, ವಾಹನ ಸವಾರರು ಆಸ್ಪತ್ರೆ ಸೇರುತ್ತಿದ್ದಾರೆ. ಪಟ್ಟಣ ಪಂಚಾಯಿತಿಯಿAದ ಪುರಸಭೆಗೆ ಮೇಲ್ದರ್ಜೆಗೆ ಏರಿಕೆಯಾದರೂ ರಸ್ತೆಯ ಅಭಿವೃದ್ಧಿ ಶೂನ್ಯವಾಗಿದೆ. ರಸ್ತೆಯು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದ್ದು, ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ಸವಾರರು ರಸ್ತೆಯ ದುಸ್ಥಿತಿ ಕಂಡು ಆಡಳಿತ ಕಾರ್ಯವೈಖರಿಗೆ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ. ಪುರಸಭೆಯು ಶೀಘ್ರವಾಗಿ ರಸ್ತೆ ದುರಸ್ತಿ ಮಾಡಲು ಮುಂದಾಗಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿ ನಾಗರಿಕ ಸಮಿತಿ ಆಗ್ರಹಿಸುತ್ತದೆ ಎಂದು ಹೇಳಿದರು.
ಸಮಿತಿಯ ಸಹ ಸಂಚಾಲಕ ವಕೀಲ ಸೋಮಲೋಕನಾಥ್ ಅವರು ಮಾತನಾಡಿ ಮೂಲಭೂತ ಸೌಕರ್ಯದಲ್ಲಿ ಕುಡಿಯುವ ನೀರು ಪ್ರಮುಖವಾಗಿದ್ದರೂ, ಪುರಸಭೆಯು ನಗರವಾಸಿಗಳಿಗೆ ಒದಗಿಸುವ ಕುಡಿಯುವ ನೀರು ಕಲುಶಿತ ಮಣ್ಣು ಮಿಶ್ರಿತವಾಗಿದ್ದು, ಬಳಕೆ ಮಾಡಲು ಯೋಗ್ಯವಲ್ಲದಾಗಿದೆ. ಪುರಸಭೆಯು ಕುಡಿಯುವ ನೀರಿನ ದರವನ್ನು ಏರಿಕೆ ಮಾಡಿದ್ದರೂ, ಬಳಕೆ ಮಾಡುವ ನೀರು ಗುಣಮಟ್ಟ ಕಾಯ್ದಿರಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಸೋಮಲೋಕನಾಥ್ ಅವರು ನೀರು ಬಳಕೆ ಮಾಡುವವರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಪುರಸಭೆಗೆ ಕೋಟಿ ಅನುದಾನ ಬಂದರೂ ಸಮರ್ಪಕ ಬಳಕೆಗೆ ಎಡವಿದೆ. ನಾಗರಿಕರಿಗೆ ಗುಣಮಟ್ಟದ ಕುಡಿಯುವ ನೀರು ಒದಗಿಸುವಲ್ಲಿ ವಿಫಲವಾಗಿದೆ. ಕಸ ವಿಲೇವಾರಿಯಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಸದಸ್ಯರಾದ ಶರೀಫ್ ಮತ್ತು ಎಲ್.ಜಿ. ಅಶೋಕ್ ಅವರುಗಳು ಹಾಜರಿದ್ದರು.