ಭಾಗಮಂಡಲ, ನ. ೯: ಗಂಗೆ ಭಾರತದಲ್ಲಿ ಹರಿಯುವ ಪುಣ್ಯ ನದಿ. ಗಂಗೆ ಹರಿಯುವ ಹಲವು ಭಾಗಗಳಲ್ಲಿ ಶುದ್ಧೀಕರಣಗೊಂಡಿದೆ. ಅದೇ ರೀತಿ ಕಾವೇರಿ ನದಿಯು ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮೂಲಕ ಸುಮಾರು ೮೦೦ ಕಿಲೋಮೀಟರ್ ಹೆಚ್ಚು ದೂರ ಹರಿಯುತ್ತದೆ. ಇದರ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಹುಣ್ಣಿಮೆ ಅಂಗವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಏಳನೇ ವರ್ಷದ ಕಾವೇರಿ ಮತ್ತು ಕನ್ನಿಕೆ ಗೆ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗಂಗಾ ನದಿಯ ಮಾದರಿಯಲ್ಲಿ ಕಾವೇರಿ ನದಿಯನ್ನು ಸ್ವಚ್ಛಗೊಳಿಸಬೇಕು; ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಛತಾ ಕಾರ್ಯವು ನಮ್ಮಿಂದಲೇ ಆರಂಭವಾಗಬೇಕು ಪವಿತ್ರ ನಾಡಿನಲ್ಲಿ ಬದುಕುತ್ತಿರುವ ಪುಣ್ಯವಂತರಾದ ನಾವು ಸ್ವಚ್ಛತೆ ಕಾಪಾಡುವಲ್ಲಿ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದರು.

ರಾಮ, ಕೃಷ್ಣ, ಶಿವ ಈ ಮೂವರು ದೇವರನ್ನು ಶ್ರದ್ಧೆಯಿಂದ ಗೌರವಿಸುವ ಸಮಾಜ ಹಿಂದೂ ಸಮಾಜ. ಹಿಂದೂಗಳು ಆಯುಧಗಳನ್ನು ದೇವರ ಕೈಯಲ್ಲಿ ಕೊಟ್ಟು ನಮ್ಮನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾರೆ.

(ಮೊದಲ ಪುಟದಿಂದ) ದೇಶದಲ್ಲಿ ಹರಿಯುವ ನದಿಗಳಿಗೂ ಅಷ್ಟೇ ಪಾವಿತ್ರö್ಯತೆ ಇದೆ. ಕಾವೇರಿ ಮಾತೆಗೆ ಕೈ ಮುಗಿದು ನಮ್ಮನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತೇವೆ. ಉತ್ತರದಲ್ಲಿ ಗಂಗಾ ನದಿಯಂತೆ ದಕ್ಷಿಣದಲ್ಲಿ ಕಾವೇರಿ ನದಿಗೆ ಹೆಚ್ಚಿನ ಮಹತ್ವವಿದೆ. ಕಾವೇರಿ ನದಿಯ ಸ್ವಚ್ಛತೆಯನ್ನು ಎಲ್ಲರೂ ಕಾಪಾಡಬೇಕು ಎಂದರು.

ಹಿಂದೂ ಪದ ಹೊರಗಡೆಯಿಂದ ಬಂದ ಪದವಲ್ಲ; ಅದು ಪ್ರಾಕೃತ ಭಾಷೆಯ ಕಾರಣಕ್ಕಾಗಿ ಬಂದಿರುವAಥದ್ದು ಆಕ್ರಮಣಕಾರಿಗಳು ನೀಡಿದ ಪದವಲ್ಲ. ಭಾರತೀಯರು ಒಗ್ಗಟ್ಟಾಗಿ ಹಿಂದೂ ಸಮಾಜವನ್ನು ನಿರ್ಮಿಸಬೇಕು; ಹಿಂದೂ ಸಮಾಜ ಜಾಗ್ರತವಾಗಿರಬೇಕು. ಇಂದು ಸಮಾಜ ಜಾಗೃತಿಯ ಸ್ಥಿತಿಯಲ್ಲಿದೆ; ಅದು ನಿರಂತರವಾಗಿರಬೇಕು. ಅಖಂಡ ಭಾರತದ ಕಲ್ಪನೆ ಇಂದು ನನಸಾಗುತ್ತಿದೆ ಸ್ವಲ್ಪ ಜಾಗೃತಿ ತಪ್ಪಿದರೂ ಈ ದೇಶದ ಈಗಿರುವ ಭಾಗವೂ ಉಳಿಯುವುದಿಲ್ಲ. ಸಂಘರ್ಷವೇ ಇಲ್ಲದಂತಹ ಶ್ರೇಷ್ಠ ಭಾರತ ನಿರ್ಮಾಣವಾಗಬೇಕು ಎಂದರು.

ದೇಶದಲ್ಲಿ ರಾಮ ಮಂದಿರ ಎನ್ನುವುದು ಜೀವಮಾನದಲ್ಲಿ ಅನ್ನ ಕೊಡುವ ಹೋರಾಟ ಎಂದು ಭಾವಿಸಿದ್ದೆವು. ರಾಮ ಎನ್ನುವ ವ್ಯಕ್ತಿತ್ವವನ್ನು ಮನೆ ಮನೆಗಳಲ್ಲಿ ಉಳಿಸಿಕೊಳ್ಳುವುದರ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಸಂಕಲ್ಪವನ್ನು ಮಾಡಿದ್ದೇವೆ. ೫೦೦ ವರ್ಷಗಳ ನಂತರವಾದರೂ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ; ಹಿಂದೂ ಸಮಾಜ ಯಾವತ್ತೂ ಹೇಡಿ ಸಮಾಜ ಅಲ್ಲ ಎಂದರು. ಶ್ರೀರಾಮ ಭಾರತಕ್ಕೆ ಮಾತ್ರ ಆದರ್ಶ ಅಲ್ಲ ಇಡೀ ಪ್ರಪಂಚಕ್ಕೆ ಆದರ್ಶ. ಕಾಶಿಯಲ್ಲಿ ಭವ್ಯವಾದ ವಿಶ್ವನಾಥನ ಮಂದಿರ ನಿರ್ಮಾಣಗೊಂಡಿದೆ. ವಿವಿಧ ದೇವರುಗಳನ್ನು ಗೌರವಿಸುವ ಹಿಂದೂ ಸಮಾಜ ಜಾಗ್ರತವಾಗಿರಬೇಕು ಎಂದರು. ಇಂದು ದೇಶದಲ್ಲಿ ಅತ್ಯಂತ ಸಮರ್ಥವಾದ ಸೇನೆಯನ್ನು ನಿರ್ಮಿಸಿದ್ದು ನಮ್ಮ ಹೆಮ್ಮೆ ಎಂದರು.

ಜಾಗೃತಿಯ ಪರ್ವ ನಿರಂತರವಾಗಿ ಇದ್ದರೆ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ, ಜಾಗೃತಿಯನ್ನು ವಿಸ್ತಾರ ಮಾಡುವ ಹೊತ್ತು ಇದಾಗಿದೆ. ಇವತ್ತಿನ ಭಾರತ ಸಾಧಾರಣ ಭಾರತ ಅಲ್ಲ ಜಾಗೃತಿಯನ್ನು ವಿಸ್ತಾರ ಮಾಡುವಂತಹ ಸಂಕಲ್ಪಕ್ಕಾಗಿ ಕಟ್ಟಿಬದ್ಧರಾಗೋಣ ಎಂದರು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಸಂಘಟಕರಾದ ಬೆಂಗಳೂರಿನ ಮುನಿಕೃಷ್ಣ, ಕರವಂಡ ಲವ ನಾಣಯ್ಯ, ಮುಕ್ಕಾಟಿರ ಸುತನ್ ಸುಬ್ಬಯ್ಯ ಮತ್ತಿತರರು ಪಾಲ್ಗೊಂಡಿದ್ದರು. -ಸುನಿಲ್