ಮುಳ್ಳೂರು, ನ. ೯: ಶನಿವಾರಸಂತೆ ರೋಟರಿ ಕ್ಲಬ್, ಪಶು ಪಾಲನಾ ಇಲಾಖೆ, ಸೋಮವಾರ ಪೇಟೆ ಮತ್ತು ಹಂಡ್ಲಿ ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿ ತಾ. ೧೨ ರಂದು ಸಮೀಪದ ಗುಡುಗಳಲೆ ಜಾತ್ರೆ ಮೈದಾನದಲ್ಲಿ ೬ನೇ ವರ್ಷದ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಗುಡುಗಳಲೆ ಜಾತ್ರೆ ಮೈದಾನದಲ್ಲಿ ಬೆಳಿಗ್ಗೆ ೮.೪೫ ರಿಂದ ಮಧ್ಯಾಹ್ನ ೧೨ ವರೆಗೆ ಲಸಿಕಾ ಶಿಬಿರವು ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ. ಜಯಕುಮಾರ್ ವಹಿಸಲಿದ್ದು, ಶಿಬಿರವನ್ನು ಮಡಿಕೇರಿ ಆಕಾಶವಾಣಿ ನಿಲಯ ನಿರ್ದೇಶಕ ಡಾ. ವಿಜಯ್ ಅಂಗಡಿ ಉದ್ಘಾಟಿಸಲಿದ್ದಾರೆ.
ರೇಬಿಸ್ ರೋಗ ಕುರಿತು ಸೋಮವಾರಪೇಟೆ ತಾಲೂಕು ಪಶು ವೈದ್ಯ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಸ್.ವಿ. ಬದಾಮಿ ಉಪನ್ಯಾಸ ನೀಡಲಿದ್ದು, ಶಿಬಿರದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ. ನಾಗರಾಜ್, ಡಾ. ಸತೀಶ್ ಕುಮಾರ್ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ವಲಯ ಸೇನಾನಿ ಹೆಚ್.ವಿ. ದಿವಾಕರ್ ಉಪಸ್ಥಿತರಿ ರುತ್ತಾರೆ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್ ತಿಳಿಸಿದ್ದಾರೆ.