ಮಡಿಕೇರಿ, ನ: ೮. ಅನಾದಿ ಕಾಲದಿಂದಲೂ ಕೊಡಗಿನ ಸಂಸ್ಕೃತಿಯ ಒಂದು ಭಾಗವಾಗಿದ್ದ ಬೇಟೆಯ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಬೇಟೆಯ ಕುರಿತಾಗಿ ಹೊರ ಬಂದಿರುವ ಬೇಟೆ ಸಾಹಿತ್ಯ ಕೃತಿಗಳನ್ನು ಸಂರಕ್ಷಿಸಬೇಕಾದ ಅಗತ್ಯತೆ ಇದೆ ಎಂದು ಸಾಹಿತಿ ಮಾಳೇಟಿರ ಸೀತಮ್ಮ ನುಡಿದರು.

ಅಲ್ಲಾರಂಡ ರಂಗಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಕೊಡಗು ವತಿಯಿಂದ ಕೊಡವ ಸಮಾಜ ಸಭಾಂಗಣದ ಕಾಕೆಮಾನಿ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಬೇಟೆ ಸಾಹಿತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಅವರು ಮಾತನಾಡಿ ದರು. ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಬೇಟೆ ಆಡುವ ಪದ್ಧತಿ ಚಾಲ್ತಿಯಲ್ಲಿತ್ತು. ಕಾಡು ಪ್ರಾಣಿಗಳಿಂದ ಬೆಳೆಗಳ ರಕ್ಷಣೆ, ಜಾನುವಾರುಗಳ ರಕ್ಷಣೆ ಇದರ ಉದ್ದೇಶವಾಗಿತ್ತು. ಕೃಷಿ ಪ್ರಧಾನವಾದ ಕೊಡಗಿನಲ್ಲಿ ಕೃಷಿ ಫಸಲಿಗೆ ಹಾನಿ ಮಾಡುವ ಪ್ರಾಣಿಗಳನ್ನು ಮಾತ್ರ ಬೇಟೆಯಾಡಲಾಗುತ್ತಿತ್ತು. ಹಬ್ಬಗಳ ಹೆಸರಿನಲ್ಲಿ ಕಟ್ಟುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಾಡು ಪ್ರಾಣಿಗಳ ವಂಶಾಭಿವೃದ್ಧಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೆಲ ತಿಂಗಳ ಕಾಲ ಬೇಟೆ ಆಡುವುದನ್ನು ನಿಷೇಧ ಮಾಡಲಾಗುತ್ತಿತ್ತು. ಈ ಪದ್ಧತಿ ಅನಾದಿಕಾಲದಿಂದಲೂ ನಡೆದು ಬಂದಿತಾದರೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೊಂಡ ಬಳಿಕ ಕೊಡಗಿನಲ್ಲಿ ಬೇಟೆ ಸಂಪೂರ್ಣ ನಿಷೇಧಕ್ಕೆ ಒಳಗಾಯಿತು. ಆದರೆ ಬೇಟೆ ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಬೇಟೆ ಸಾಹಿತಿಗಳಿಂದ ರಚಿಸಲ್ಪಟ್ಟಿರುವ ಬೇಟೆಯ ಕುರಿತಾದ ಪುಸ್ತಕಗಳನ್ನು ಉಳಿಸಿಕೊಂಡು ಬೇಟೆ ಸಂಸ್ಕೃತಿಯ ಅನುಭವದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಬೇಟೆ ಸಾಹಿತ್ಯ ಕೃತಿಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದು ಮಾಳೇಟಿರ ಸೀತಮ್ಮ ಹೇಳಿದರು.

ಬೇಟೆ ಪುಸ್ತಕವನ್ನು ಅನಾವರಣೆಗೊಳಿಸಿದ ಸಾಹಿತಿ ನಾರಾಯಣ ಸ್ವಾಮಿ ಅವರು ಮಾತನಾಡಿ ಪುಸ್ತಕಗಳಿಗಿಂತ ಮಿಗಿಲಾದ ಸ್ನೇಹಿತರಿಲ್ಲ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡವರು ದಾರಿ ತಪ್ಪಿದ ಉದಾಹರಣೆಗಳಿಲ್ಲ ಎಂದರಲ್ಲದೆ ಪ್ರತಿಯೊಬ್ಬರೂ ಪುಸ್ತಕಗಳನ್ನು ಪ್ರೀತಿಸುವಂತಾಗ ಬೇಕೆಂದು ಆಶಿಸಿದರು.

ವಕೀಲ ಹಾಗೂ ಸಾಹಿತಿಗಳಾದ ಕೆ.ಆರ್. ವಿದ್ಯಾಧರ್ ಅವರು ಬೇಟೆ ಸಾಹಿತ್ಯದ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕೊಡಗಿನ ಪ್ರಥಮ ಬೇಟೆ ಸಾಹಿತಿ ಕಾಕೆಮಾನಿಯವರ ಪುತ್ರ ಬಾಚಮಾಡ ಎಸ್. ವಸಂತ ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ ಕೊಡಗು ಘÀಟಕದ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಂಗಕರ್ಮಿ ಮಾದೇಟಿರ ಬೆಳ್ಯಪ್ಪ, ಮಾಳೇಟಿರ ಮಧು ಬೇಟೆ ಕುರಿತಾದ ಹಾಡನ್ನು ಹಾಡಿದರು. ಕೊಡಗಿನ ಬೇಟೆ ಸಾಹಿತಿ ಬಿ.ಆರ್. ಜೋಯಪ್ಪ, ದೇವರಕಾಡ್ ಸಿನಿಮಾ ನಿರ್ಮಾಪಕ ಅವಿನಾಶ್ ಶೆಟ್ಟಿ, ಕೊಡಗಿನಲ್ಲಿ ಕೊನೆಯ ಹುಲಿ ಮದುವೆ ಮಾಡಿದ ಕಲ್ಲುಮಾಡಂಡ ಜಿಮ್ಮಿ ಮಾದಯ್ಯ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹರದಾಸ ಅಪ್ಪಚ್ಚಕವಿ ಸ್ಮರಣೆಯೊಂದಿಗೆ ಬರಹಗಾರ ಬಾಲಸುಬ್ರಮಣ್ಯ ಅವರ ನಿಧನಕ್ಕೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.