ಸುಂಟಿಕೊಪ್ಪ,ನ.೮: ಸುಂಟಿಕೊಪ್ಪ ಕನ್ನಡ ವೃತ್ತದ ಬಳಿಯಲ್ಲಿ ಸಾಗುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರಿಗೆ ಹಣ ಮತ್ತು ಮೊಬೈಲ್ ಇರುವ ಪರ್ಸ್ ದೊರೆತಿದ್ದು ಪೊಲೀಸ್ ಠಾಣೆಗೆ ನೀಡುವ ಮೂಲಕ ವಾರಿಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಗದ್ದೆಹಳ್ಳದ ಗಿರಿಯಪ್ಪ ಮನೆ ನಿವಾಸಿ ಫೈರೋಜ್ ಖಾನ್ ಎಂಬವರು ಪಟ್ಟಣಕ್ಕೆ ಕಾರ್ಯನಿಮಿತ್ತ ಆಗಮಿಸುತ್ತಿದ್ದ ವೇಳೆ ಕನ್ನಡ ವೃತ್ತದ ಬಳಿ ನಗದು ಹಾಗೂ ಮೊಬೈಲ್ ಇರುವ ಪರ್ಸ್ ದೊರೆತಿದ್ದು, ಅದನ್ನು ಪೊಲೀಸ್ ಠಾಣೆಗೆ ನೀಡಿದ್ದಾರೆ.

ಇದೇ ಸಂದರ್ಭ ಪರ್ಸ್ನಲ್ಲಿದ್ದ ಮೊಬೈಲಿಗೆ ಕರೆಯೊಂದು ಬಂದಿದ್ದು, ಪೊಲೀಸರು ಅವರನ್ನು ವಿಚಾರಿಸಿದಾಗ ಮಾದಾಪುರ ಸಮೀಪದ ಜಾರ್‌ಕೊಲ್ಲಿ ನಿವಾಸಿ ಕಾರ್ಮಿಕ ಮಹಿಳೆ ಸಿಂದು ಪ್ರಸನ್ನ ಅವರಿಗೆ ಸೇರಿದ ಹಣ ಹಾಗೂ ಮೊಬೈಲ್ ಎಂದು ಗೊತ್ತಾಗಿದೆ. ತಕ್ಷಣ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಕೇರಳದ ಎರ್ನಾಕುಳಂನಲ್ಲಿ ಅನಾರೋಗ್ಯದಲ್ಲಿರುವ ತಂಗಿಯನ್ನು ಕಾಣಲು ತೆರಳುವ ಸಂದರ್ಭ ರೂ.೧೦ ಸಾವಿರ ಹಾಗೂ ಮೊಬೈಲ್ ಕಳೆದುಕೊಂಡಿದ್ದಾಗಿ ಆತಂಕದಿAದ ನುಡಿದಿದ್ದಾರೆ.

ಕೂಡಲೇ ಎಂ.ಆರ್.ಪಿರೋಜ್ ಖಾನ್ ಮೂಲಕ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಮಹಿಳೆಗೆ ಹಣ ಹಾಗೂ ಮೊಬೈಲ್ ಹಸ್ತಾಂತರಿಸಿದರು. ಈ ಸಂದರ್ಭ ಠಾಣಾಧಿಕಾರಿ ಮಂಜು, ಎಎಸ್‌ಐ ಜಯಕುಮಾರ್ ಹಾಜರಿದ್ದರು.