ವೀರಾಜಪೇಟೆ, ನ. ೮: ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಹಾಗೂ ಅಮ್ಮತ್ತಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ ತಾ. ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಪಂಚಾಯಿತಿ ಎದುರು ಧರಣಿ ಮುಷ್ಕರ ನಡೆಸುವುದಾಗಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದ) ಅಮ್ಮತ್ತಿ ಕಾರ್ಮಾಡು ಶಾಖೆಯ ಕಾರ್ಯದರ್ಶಿ ಎ. ಮಹದೇವ ಹೇಳಿದರು.
ವೀರಾಜಪೇಟೆಯ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದಿವಾಸಿಗಳು, ದಲಿತರು ನಿವೇಶನ ರಹಿತರು ಇದ್ದಾರೆ. ಅವರಿಗೆ ಇದುವರೆಗೆ ಸರಕಾರದಿಂದ ನಿವೇಶನ ಒದಗಿಸುವ ಕೆಲಸವಾಗಿಲ್ಲ, ಪಂಚಾಯಿತಿಯವರಿಗೆ ಮನವಿ ನೀಡಿದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಪೈಸಾರಿ ಜಾಗವನ್ನು ಗುರುತಿಸಲು ಇದುವರೆಗೂ ಮುಂದಾಗಿಲ್ಲ. ಕಾರ್ಮಾಡು ಗ್ರಾಮದಲ್ಲಿ ೧.೯೯ ಎಕರೆ ಪೈಸಾರಿ ಜಾಗವಿದ್ದು ಆ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಅಮ್ಮತ್ತಿ ಪಟ್ಟಣದಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ಬಸ್ಸು ತಂಗುದಾಣ ಮತ್ತು ಶೌಚಾಲಯವಿತ್ತು. ಅದನ್ನು ಕೆಡವಿ ಆ ಜಾಗದಲ್ಲಿ ಪಂಚಾಯಿತಿ ವತಿಯಿಂದ ಅಂಗಡಿ ಮಳಿಗೆಗಳನ್ನು ನಿರ್ಮಿಸಿದೆ. ಆದ್ದರಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಪಂಚಾಯಿತಿ ವತಿಯಿಂದ ಆದಷ್ಟು ಬೇಗ ಬಸ್ಸು ತಂಗುದಾಣ ಮತ್ತು ಶೌಚಾಲಯ ನಿರ್ಮಿಸಬೇಕು ಇಲ್ಲದಿದ್ದಲ್ಲಿ ನಿರಂತರ ಹೋರಾಟ ಮತ್ತು ಕಾನೂನಿನ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ತಾ.೧೦ ರಂದು ಬೆಳಿಗ್ಗೆ ಅಮ್ಮತ್ತಿ ರಾಮ ಮಂದಿರದಿAದ ಮೆರವಣಿಗೆ ಮೂಲಕ ಸಾಗಿ ಕಾರ್ಮಾಡು ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು, ಸ್ಥಳಕ್ಕೆ ತಹಶೀಲ್ದಾರರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡುವವರೆಗೂ ಧರಣಿ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಮಹದೇವ ಎಚ್ಚರಿಸಿದರು. ಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಶಿವಪ್ಪ, ಅಮ್ಮತ್ತಿ ಶಾಖೆಯ ಸದಸ್ಯ ಇಬ್ರಾಹಿಂ ಹಾಗೂ ಬಿ.ಕೆ. ಮಾಂಕು ಉಪಸ್ಥಿತರಿದ್ದರು.