ಮಡಿಕೇರಿ, ನ. ೯: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಉದ್ಘಾಟನೆ ಕಾರ್ಯಕ್ರಮ ತಾ. ೧೨ ರಂದು ನಡೆಯಲಿದೆ ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ೧೧.೩೦ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಕಟ್ಟಡ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವಾರ್ಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯಾಧೀಶರುಗಳಾದ ಇ.ಎಸ್. ಇಂದ್ರೇಶ್, ಎಂ.ಜಿ. ಶುಕ್ರೆ ಕಮಲ್, ಸಿ.ಎಂ. ಪೂಣಚ್ಚ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಮಾದುಸ್ವಾಮಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ಹೈಕೋರ್ಟ್ ರಿಜಿಸ್ಟಾçರ್ ಮುರುಳೀಧರ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಬಸ್ ಸೌಕರ್ಯ

ನ್ಯಾಯಾಲಯಕ್ಕೆ ತೆರಳಲು ಬಸ್ ವ್ಯವಸ್ಥೆ ಬೇಕಾಗಿರುವ ಹಿನ್ನೆಲೆ ಸಂಬAಧಪಟ್ಟ ಇಲಾಖೆಯ ಗಮನ ಸೆಳೆದಿದ್ದು, ಅವರಿಂದ ಸಕರಾತ್ಮಕ ಸ್ಪಂದನ ದೊರೆತಿದೆ. ಜೊತೆಗೆ ಇಕ್ಕಟ್ಟಿನ ರಸ್ತೆಯನ್ನು ಅಗಲೀಕರಣದ ಬಗ್ಗೆ ಜಿಲ್ಲಾಡಳಿತ ಹಾಗೂ ನಗರಸಭೆಯ ಗಮನಕ್ಕೆ ತಂದಿದ್ದು, ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಇದರಿಂದ ಕಕ್ಷಿದಾರರಿಗೆ ನೆರವಾಗಲಿದೆ ಎಂದರು.

ಭಾವನಾತ್ಮಕ ವಿದಾಯ

ಹಲವು ವರ್ಷಗಳ ಕಾಲ ಕೋಟೆ ಆವರಣದಲ್ಲಿದ್ದ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ವಕೀಲರು ಇಂದು ಚಪ್ಪಾಳೆ

(ಮೊದಲ ಪುಟದಿಂದ) ತಟ್ಟುವ ಮೂಲಕ ತಮ್ಮ ನೆನಪುಗಳನ್ನು ಸ್ಮರಿಸಿಕೊಂಡು ನ್ಯಾಯಾಲಯಕ್ಕೆ ವಿದಾಯ ಹೇಳಿದ್ದೇವೆ ಎಂದು ದಯಾನಂದ್ ಹೇಳಿದರು.

ಮುಂದಿನ ದಿನಗಳಲ್ಲಿ ಹಳೇ ನ್ಯಾಯಾಲಯವನ್ನು ರಕ್ಷಿಸಿಕೊಂಡು ಅಲ್ಲಿ ಉದ್ಯಾನವನ್ನು ನಿರ್ಮಿಸಿ ಆಕರ್ಷಕಗೊಳಿಸುವ ಚಿಂತನೆ ಇದೆ ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್.ತಿಮ್ಮಯ್ಯ ಮಾತನಾಡಿ, ಸಂಕೀರ್ಣದಲ್ಲಿ ೯ ಕೋರ್ಟ್ ಹಾಲ್‌ಗಳಿದ್ದು, ನ್ಯಾಯಾಲಯವನ್ನು ಭವಿಷ್ಯದ ದೃಷ್ಟಿಯಲ್ಲಿ ನಿರ್ಮಿಸಲಾಗಿದೆ. ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸಂಜಯ್ ರಾಜ್ ಹಾಜರಿದ್ದರು.