ಪೊನ್ನಂಪೇಟೆ, ನ. ೯: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಮೂರ್ನಾಡಿನ ಹಿರಿಯ ವೈದ್ಯರಾದ, ಮೂಲತಃ ಕೊಂಡAಗೇರಿಯ ಡಾ. ಜೋಯಿಪೆರ ಎ. ಕುಂಞಬ್ದುಲ್ಲ ಅವರನ್ನು ಸಂಸ್ಥೆಯ ಪರವಾಗಿ ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಕೆ.ಎಂ.ಎ. ಸಂಸ್ಥೆಯ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವೀರಾಜಪೇಟೆಯ ಸೆರಿನಿಟಿ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-೨೦೨೨ ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಕೋವಿಡ್ ಸಂಕಷ್ಟದಲ್ಲಿ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಜನಾನುರಾಗಿರುವ ಡಾ. ಜೆ.ಎ. ಕುಂಞಬ್ದುಲ್ಲ ಅವರನ್ನು ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಂ.ಎ. ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಡಾ. ಕುಂಞಬ್ದುಲ್ಲ, ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆ ಎಂದಾದರೂ ಗುರುತಿಸಲ್ಪಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕೆ.ಎಂ.ಎ. ಸಂಸ್ಥೆ ನೀಡಿದ ಈ ಗೌರವದಿಂದಾಗಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಆದ್ದರಿಂದ ತಮ್ಮ ವೈದ್ಯಕೀಯ ಸೇವೆಯನ್ನು ಮತ್ತಷ್ಟು ಜನೋಪಕಾರಿಯಾಗಿ ಮುಂದುವರಿಸ ಲಾಗುವುದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಕೋವಿಡ್ ಸೋಂಕು ವೈದ್ಯ ಲೋಕಕ್ಕೆ ಬಹುದೊಡ್ಡ ಸವಾಲಾಗಿತ್ತು. ಅದರಲ್ಲೂ ಖಾಸಗಿ ವೈದ್ಯ ಲೋಕ ಹೆಚ್ಚು ಆತಂಕಗೊAಡ ಪರಿಣಾಮ ಜಿಲ್ಲೆಯ ಸಾಕಷ್ಟು ಖಾಸಗಿ ಕ್ಲಿನಿಕ್ಗಳು ಮುಚ್ಚಲ್ಪಟ್ಟಿದ್ದವು. ಆದರೆ ಡಾ. ಕುಂಞಬ್ದುಲ್ಲ ಅವರ ಮೂರ್ನಾಡಿನ ಕ್ಲಿನಿಕ್ ಒಂದು ದಿನವೂ ಚಿಕಿತ್ಸೆ ಹರಿಸಿ ಬರುವ ರೋಗಿಗಳನ್ನು ಬರಿಗೈಯಲ್ಲಿ ಕಳಿಸಲಿಲ್ಲ. ಜಿಲ್ಲೆಯಲ್ಲಿ ಕೋವಿಡ್ ತಲ್ಲಣ ಉತ್ತುಂಗಕ್ಕೇರಿದ ಸಂದರ್ಭದಲ್ಲಿ ಡಾ. ಕುಂಞಬ್ದುಲ್ಲ ಅವರ ವೈದ್ಯಕೀಯ ಸೇವೆ ಮಹೋನ್ನತವಾದದ್ದು ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕರ್ನಾಟಕದ ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್, ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಮೈಸೂರಿನ ಎಂ. ಲಕ್ಷö್ಮಣ, ಎನ್.ಸಿ.ಟಿ. ಗ್ರೂಪ್ ಮಾಲೀಕ ಅಕ್ಕಳತಂಡ ಎಸ್. ಮೊಯ್ದು ಮೊದಲಾದವರು ಪಾಲ್ಗೊಂಡಿದ್ದರು. ಆರಂಭದಲ್ಲಿ ಮಂಡೆAಡ ಎಂ. ಮುಶ್ರಫ್ ಕಿರಾಅತ್ ಪಠಿಸಿದರು. ನಿರ್ದೇಶಕರಾದ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ಸನ್ಮಾನಿತರ ಪರಿಚಯ ಭಾಷಣ ಮಾಡಿದರು. ದುದ್ದಿಯಂಡ ಮುಸ್ಕಾನ್ ಸೂಫಿ ಮತ್ತು ದುದ್ದಿಯಂಡ ನಿಷ್ಮಾ ಮೊಯ್ದು ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಕುಪ್ಪೋಡಂಡ ಅಬ್ದುಲ್ ರಶೀದ್ ವಂದಿಸಿದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ, ಗುಂಡಿಕೆರೆಯ ದಫ್ ರಾತೀಬ್ ತಂಡದವರು ಮನೋಹರವಾಗಿ ಸಾದರಪಡಿಸಿದ ಧಾರ್ಮಿಕ ಕಲೆಯಾದ ದಫ್ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.