ಕುಶಾಲನಗರ, ನ.೯ : ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಈ ಸಾಲಿನಲ್ಲಿ ಒಟ್ಟು ರೂ. ೧೦೦ ಕೋಟಿ ಅನುದಾನ ಬಿಡುಗಡೆ ಆಗಿದ್ದು, ಜನರಿಗೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆ ಕಲ್ಪಿಸುವ ಕ್ರಿಯಾಯೋಜನೆ ರೂಪುಗೊಂಡಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಅವರು, ಕುಶಾಲನಗರದಲ್ಲಿ ವಿವಿಧ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರದ ಮೂಲಕ ಪ್ರಧಾನಮಂತ್ರಿ ಮೋದಿ ಅವರು ಪ್ರತಿ ಮನೆ ಮನೆ ಗಳಿಗೂ ವಿದ್ಯುತ್, ಶುದ್ಧ ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆ ಸೇರಿದಂತೆ ಗ್ರಾಮೀಣ ಭಾಗಗಳಿಗೆ ಎಲ್ಲಾ ಮೂಲಭೂತ

(ಮೊದಲ ಪುಟದಿಂದ) ಸೌಲಭ್ಯ ಒದಗಿಸುವ ಕನಸು ನನಸಾಗಿದೆ ಎಂದು ರಂಜನ್ ಹೇಳಿದರು. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಆರೋಗ್ಯ ಮತ್ತಿತರ ಸೌಲಭ್ಯಗಳಿಗೆ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ ಎಂದರು.

ನಗರೋತ್ಥಾನ ಯೋಜನೆ ಅಡಿಯಲ್ಲಿ ರೂ. ೫ ಕೋಟಿ ಬಿಡುಗಡೆ ಮಾಡಿದ್ದು, ಈಗಾಗಲೇ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು. ಕುಶಾಲನಗರ ವೆಂಕಟೇಶ್ವರ ಬಡಾವಣೆ ಮತ್ತು ಪಟೇಲ್ ಬಡಾವಣೆ ಸಂಪರ್ಕ ರಸ್ತೆಗಳಿಗೆ ಚಾಲನೆ ನೀಡಿದ ಶಾಸಕ ರಂಜನ್ ಅವರು, ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಯೋಜನೆಯ ಗುರುತು ಚೀಟಿಯನ್ನು ವಿತರಣೆ ಮಾಡಿದರು.

ಇದೇ ಸಂದರ್ಭ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶೇಷಚೇತನರಿಗೆ ಅವಶ್ಯಕತೆ ಇರುವ ಮೂಲಭೂತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರೂ.೧೦ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತಿತರರು ಇದ್ದರು.