ಮಡಿಕೇರಿ, ನ. ೭: ಸಂಪಾಜೆ ಹೋಬಳಿಯ ಬಿಳಿಗೇರಿ ವೃತ್ತದ ಬಿಳಿಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ತಾ. ೧೪ ರಂದು ಬಿಳಿಗೇರಿ ಗ್ರಾಮದ ಶ್ರೀ ಭಗವತಿ ಯುವಕ ಸಂಘದ ಸಭಾಂಗಣದಲ್ಲಿ ಉಪ ತಹಶೀಲ್ದಾರರ ನೇತೃತ್ವದಲ್ಲಿ ನಡೆಯಲಿದೆ.

ಬಿಳಿಗೇರಿ ಗ್ರಾಮದ ರೈತ ಬಾಂಧವರು ಪೌತಿ ಖಾತೆ ಅಡಿ ಖಾತೆ ವರ್ಗಾವಣೆ ಮಾಡಲು ಖಾತೆದಾರನ ಮರಣ ದೃಢೀಕರಣ ಪತ್ರ, ಒಂದು ವೇಳೆ ಮರಣ ದೃಢೀಕರಣ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಸ್ಥಳ ತನಿಖೆ/ ಮಹಜರ್ ಮಾಡಿ ಮೃತ ಖಾತೆದಾರರು ಮರಣ ಹೊಂದಿರುವ ಬಗ್ಗೆ ಸಂಬAಧಪಟ್ಟ ವಾರಸುದಾರರಿಂದ ಅಫಿಡವಿಟ್‌ನ್ನು ಪಡೆದು ಅವರುಗಳ ಪಡಿತರ ಚೀಟಿ ಮತ್ತು ಆಧಾರ್ ದಾಖಲೆಗಳನ್ನು ಪಡೆದುಕೊಳ್ಳಬೇಕು.

ಆರ್.ಡಿ. ಸಂಖ್ಯೆಯುಳ್ಳ ವಂಶ ವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ, ಚಾಲ್ತಿ ಸಾಲಿನ ಪಹಣಿ ಕಾಲಂ ೧೦ ರಲ್ಲಿ ದಾಖಲಿಸಿರುವ ಮ್ಯೂಟೇಷನ್ ಪ್ರತಿ/ ಜಮಾಬಂದಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಂದಾಯ ಪರಿವೀಕ್ಷಕರು ತಿಳಿಸಿದ್ದಾರೆ.