ಶನಿವಾರಸAತೆ, ನ. ೮: ಸಮೀಪದ ದುಂಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ೭ ಗಂಟೆಗೆ ದರ್ಶನ ನೀಡಿದ ೫ ಕಾಡಾನೆಗಳು ಅರಣ್ಯ ಇಲಾಖೆ ಕಚೇರಿ ಪಕ್ಕದ ತೋಟದೊಳಗೆ ನುಗ್ಗಿ ಲಕ್ಕೆಹನಲು ಗ್ರಾಮದ ಹತ್ತಿರದ ಅರಣ್ಯದೊಳಗೆ ಸೇರಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ ಗ್ರಾಮದ ಕಾಫಿ ತೋಟಗಳಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಆನೆಗಳನ್ನು ಗ್ರಾಮಸ್ಥರು ಓಡಿಸಿದ್ದು, ಅಲ್ಲಿಂದ ಅಪ್ಪಶೆಟ್ಟಳ್ಳಿ ಗ್ರಾಮದ ತೋಟಗಳಿಗೆ ಬಂದಿದ್ದ ಆನೆಗಳನ್ನು ಓಡಿಸಲಾಗಿ ಬೆಳಿಗ್ಗೆಯೇ ಅರಣ್ಯದತ್ತ ಸಾಗಿದ್ದವು.
ಒಂದು ತಿಂಗಳಿನಿAದ ಕಾಡಾನೆಗಳ ಸಂಚಾರ ಆರಂಭವಾಗಿದ್ದು, ೩ ಆನೆಗಳಿಂದ ೫ ಆನೆಗಳಿಗೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಏರಿಕೆಯಾಗುತ್ತಿವೆ. ಕಾಫಿ ತೋಟಗಳಲ್ಲಿ ಹಣ್ಣಿನ ಕೊಯ್ಲು ಆರಂಭವಾಗಿದ್ದು, ಕಾರ್ಮಿಕರು ಆನೆಗಳ ಭಯದಿಂದ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ತೋಟ ಮಾಲೀಕರು ಹತಾಶರಾಗಿದ್ದು, ತೋಟಗಳತ್ತ ಮುಖ ಮಾಡುತ್ತಿಲ್ಲ ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಬೆಳೆಗಾರ ರಕ್ಷಿತ್ ಹೇಳುತ್ತಾರೆ.
ತೋಟಗಳಲ್ಲಿ ಬಾಳೆಗಿಡ, ಪಪ್ಪಾಯಿ ಹಣ್ಣಿನ ಗಿಡಗಳನ್ನು ಎಳೆದು ತಿಂದು, ತುಳಿದು ನಾಶಪಡಿಸುತ್ತಿವೆ. ಮುಖ್ಯವಾಗಿ ಪೈಪ್‌ಗಳು, ಕೃಷಿ ಸಲಕರಣೆಗಳನ್ನು ತುಳಿದು ಧ್ವಂಸ ಗೊಳಿಸುತ್ತಿವೆ. ಏನು ಮಾಡುವುದೆಂದೇ ತೋಚುತ್ತಿಲ್ಲ ಎಂದು ಕೆಲ ರೈತರು ಅಸಹಾಯಕತೆ ವ್ಯಕ್ತಪಡಿಸಿದರು.ಕಾಡಾನೆಗಳ ನಿತ್ಯ ದರ್ಶನದ ಬಗ್ಗೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಅವರು ಪ್ರತಿಕ್ರಿಯಿಸಿ, ಆರಂಭದಲ್ಲಿ ೩ ಇದ್ದ ಕಾಡಾನೆಗಳ ಸಂಖ್ಯೆ ೫ಕ್ಕೆ ಏರಿದೆ. ಯಸಳೂರು ಮೀಸಲು ಅರಣ್ಯದ ಕಡೆಯಿಂದ ಬಂದ ಆನೆಗಳಾದರೂ ಈ ಹಿಂದೆ ಈ ಕಡೆಯಿಂದಲೇ ಓಡಿಸಲಾಗಿದ್ದು, ಅದೇ ದಾರಿಯಲ್ಲಿ ಬರುತ್ತಿರಬಹುದು. ಅಲ್ಲಿ ಸೋಲಾರ್ ಅಳವಡಿಸಲಾಗಿದೆ. ಆದರೆ ಈ ಭಾಗಕ್ಕೆ ಬಂದ ನಂತರ ಆನೆಗಳಿಗೆ ಮರಳಿ ಹೋಗಲಾಗುತ್ತಿಲ್ಲವೆನಿಸುತ್ತದೆ. ಇನ್ನೆರಡು ದಿನಗಳಲ್ಲಿ ಅವುಗಳ ಜಾಡು ತಿಳಿದು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.