ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ನ. ೭: ಓಟುಗಳಿಸಿ ಜಯಶೀಲರಾಗಿ ಜವಾಬ್ದಾರಿ ಹೊತ್ತ ಪಂಚಾಯಿತಿ ಸದಸ್ಯರುಗಳೇ ಪಂಚಾಯಿತಿಯ ಪ್ರತಿಯೊಂದು ಕಾಮಗಾರಿಗಳಿಗೂ ಅಡ್ಡಿಪಡಿಸುವ ಮೂಲಕ ಕಾಮಗಾರಿ ಕಾರ್ಯ ನಡೆಯದೇ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ಗ್ರೇಡ್-೧ ಚೆಟ್ಟಳ್ಳಿ ಗ್ರಾ.ಪಂ. ಎಂಬ ಹೆಸರುಗಳಿಸಿರುವ ಪಂಚಾಯಿತಿ ಸದಸ್ಯರ ಒಮ್ಮತವಿಲ್ಲದ ಆಡಳಿತಕ್ಕೆ ಸಾರ್ವಜನಿಕರು ಬೇಸತ್ತಿದ್ದಾರೆ.
ರಾಜಕೀಯ ಪ್ರತಿಷ್ಠೆಗೆ ಪಂಚಾಯಿತಿ ಸಭೆ ವೇದಿಕೆ
ಚೆಟ್ಟಳ್ಳಿ ಗ್ರಾ.ಪಂ.ಗೆ ನೂತನವಾಗಿ ಜನಪ್ರತಿನಿಧಿಗಳು ಅಧಿಕಾರ ವಹಿಸಿ ಕೊಂಡಲ್ಲಿAದ ಸದಸ್ಯರುಗಳಿಂದಲೇ ಪಂಚಾಯಿತಿ ಅಭಿವೃದ್ಧಿಗೆ ತಡೆ ಉಂಟಾಗಿದೆ. ಮೊದಲ ಸಭೆಯಿಂದಲೇ ರಾಜಕೀಯ ಪ್ರತಿಷ್ಠೆಯ ಅಖಾಡವಾದ ಪಂಚಾಯಿತಿ ಸಭಾಂಗಣ ಇಂದಿನವರೆಗೂ ನಡೆದ ಪ್ರತಿಯೊಂದು ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಸದಸ್ಯರುಗಳ ಮಧ್ಯೆ ವಾಗ್ವಾದಗಳು, ಆರೋಪ - ಪ್ರತ್ಯಾರೋಪಗಳು ನಡೆದು ಒಮ್ಮೊಮ್ಮೆ ಕೈಕೈಮಿಲಾಯಿ ಸುವ ಹಂತ ಕೂಡ ತಲುಪಿದೆ. ಗ್ರಾಮ ಸಭೆಯಲ್ಲೂ ಪರಸ್ಪರ ಗದ್ದಲಗಳು ಏರ್ಪಟ್ಟು ಮುಂದಿನ ಕ್ರೀಯಾ ಯೋಜನೆ ಅಂತಿಮಗೊಳಿಸಲು ಸಾಧ್ಯವಾಗದೆ ಹಾಗೇ ಉಳಿದಿರುವ ಉದಾಹರಣೆಗಳಿವೆ.
ಅಂದು ಪ್ರತಿಷ್ಠೆಯ ಕಣವಾಗಿ ಗೆದ್ದು ಬಂದವರು ಕಾಮಗಾರಿ ಮಾಡಲಾಗದೆ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಲಾಗದೆ ಪಂಚಾಯಿತಿ ಸದಸ್ಯ ಸ್ಥಾನವೇ ತಮಗೆ ಬೇಡವಾಗಿತ್ತೆಂದು ಸಾರ್ವಜನಿಕರಲ್ಲಿ ಹೇಳುತ್ತಿದ್ದಾರೆ.
ಸದಸ್ಯರಿಂದಲೇ ಫಲಕಾರಿಯಾಗದ ೧.೫೦ ಕೋಟಿ ಕ್ರಿಯಾಯೋಜನೆ
೨೦೨೧ರಿಂದ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ೧.೫೦ ಕೋಟಿಯಲ್ಲಿ ಕ್ರಿಯಾ ಯೋಜನೆ ತಯಾರು ಮಾಡಲಾಗಿತ್ತು. ಚೆಟ್ಟಳ್ಳಿ, ಕಂಡಕರೆ ಹಾಗೂ ಈರಳೆವಳ ಮುಡಿಯ ಸರಕಾರಿ ಪ್ರಾಥಮಿಕ ಶಾಲೆಗಳ ಉದ್ಯಾನವನ ನಿರ್ಮಾಣಕ್ಕೆ ಮೊದಲ ಕಾಮಗಾರಿಯಾಗಿ ರೂ.೫ ಲಕ್ಷ ಬಿಡುಗಡೆಗೊಳಿಸಲಾಯಿತು. ಕಾಮಗಾರಿ
(ಮೊದಲ ಪುಟದಿಂದ) ಪ್ರಾರಂಭವಾಗುತ್ತಲೇ ಉದ್ಯೋಗ ಖಾತ್ರಿಯ ಕಾರ್ಮಿಕರಲ್ಲದೆ ಬೇರೆಯವರು ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದ್ದಾರೆಂದು ಕೆಲವು ಪಂಚಾಯಿತಿ ಸದಸ್ಯರು ತಡೆೆ ಒಡ್ಡುವ ಮೂಲಕ ಕಾಮಗಾರಿ ಇದೀಗ ನಿಂತು ಹೋಗಿದೆ. ಇದರಿಂದಾಗಿ ಇನ್ನುಳಿದ ಕಾಮಗಾರಿಗಳೂ ತಡೆಯಾಗಿದ್ದು, ಒಟ್ಟು ೧.೫ ಕೋಟಿ ರೂ. ಕ್ರಿಯಾಯೋಜನೆ ನೆನೆಗುದಿಗೆ ಬಿದ್ದಂತಾಗಿದೆ.
ವರ್ಷದಲ್ಲಿ ೧೦೦ಕ್ಕೂ ಹೆಚ್ಚು ಮಾಹಿತಿ ಹಕ್ಕು
ಕಳೆದ ವರ್ಷದ ಕಾಮಗಾರಿಯ ಮಾಹಿತಿ, ಈ ವರ್ಷದ ಕಾಮಗಾರಿಗಳ ಮಾಹಿತಿ ಬೇಕೆಂದೂ ಮಾಜಿ ಪಂಚಾಯಿತಿ ಸದಸ್ಯರು, ಹಾಲಿ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ ವರ್ಷದಲ್ಲಿ ೧೦೦ಕ್ಕೂ ಹೆಚ್ಚು ಬಾರಿ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದ್ದಾರೆ. ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆಯ ನಡುವೆ ಇತರ ಕೆಲಸ ಕಾರ್ಯಗಳ ಬದಲಾಗಿ ಮಾಹಿತಿ ನೀಡುವ ಕೆಲಸವೇ ಪಂಚಾಯಿತಿ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮಾಹಿತಿ ಹಕ್ಕುಗಳ ಮೂಲಕ ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ ಎಂಬ ದೂರುಗಳು ಮೇಲಧಿಕಾರಿಗಳಿಗೆ ತಲುಪುತ್ತಿದೆ.
ಫಲಕಾರಿಯಾಗದÀ ಮೇಲಧಿಕಾರಿಗಳ ಪ್ರಯತ್ನ...
ಚೆಟ್ಟಳ್ಳಿ ಗ್ರಾ.ಪಂ.ಯ ಒಮ್ಮತವಿಲ್ಲದ ಸದಸ್ಯರ ಆಡಳಿತ ಮೇಲಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿರುವುದರಿಂದ ಈ ಹಿಂದೆ ಜಿ.ಪಂ. ಉಪಕಾರ್ಯದರ್ಶಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು, ಚೆಟ್ಟಳ್ಳಿ ಗ್ರಾ.ಪಂ.ಗೆ ಭೇಟಿ ನೀಡಿ ಸದಸ್ಯರೊಂದಿಗೆ ಒಮ್ಮತ ಮೂಡಿಸಲು ಚರ್ಚೆ ನಡೆಸಿದರೂ ಫಲಕಾರಿಯಾಗಲಿಲ್ಲ. ದೂರುಗಳನ್ವಯ ಸಾಮಾಜಿಕ ಲೆಕ್ಕಪರಿಶೋಧನಾ ದಿನದಂದು ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು.
ಪಂಚಾಯಿತಿ ಸದಸ್ಯರಿಂದಲೇ ಬೇಸತ್ತ ಅಧ್ಯಕ್ಷ...
ಪಂಚಾಯಿತಿ ಸದಸ್ಯರುಗಳ ಒಮ್ಮತವಿಲ್ಲದ ನಡೆ..ಇಲ್ಲಸಲ್ಲದ ವಿಚಾರಕ್ಕೆ ಅಧ್ಯಕ್ಷನಾದ ತನ್ನ ಮೇಲೆ ಆರೋಪ, ಪ್ರತಿ ಸಭೆಯಲ್ಲೂ ಅಶಾಂತಿ ಮೂಡಿಸುವ ಪರಿಣಾಮ ೨ ವರ್ಷಗಳಿಂದ ಕಾಮಗಾರಿ ನಡೆಸಲು ಸಾಧ್ಯವಾಗದ್ದರಿಂದ ಅಧ್ಯಕ್ಷ ಸ್ಥಾನವೇ ತÀನಗೆ ಕುತ್ತಾಗಿ ಪರಿಣಮಿಸಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಮುತ್ತಪ್ಪ ‘ಶಕ್ತಿ’ಯೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ.