ಮಡಿಕೇರಿ, ನ. ೭: ತಾ.೮ ರಂದು (ಇಂದು) ಗ್ರಸ್ತೋದಯ ಚಂದ್ರಗ್ರಹಣ (ಚಂದ್ರೋದಯ ಸಂದರ್ಭ ಸಂಭವಿಸುವ ಗ್ರಹಣ) ಸಂಭವಿಸಲಿದ್ದು, ಭಾರತ ಸೇರಿದಂತೆ ಇತರ ಹಲವು ರಾಷ್ಟçಗಳಲ್ಲಿ ಗ್ರಹಣ ವೀಕ್ಷಣೆ ಸಾಧ್ಯವಾಗಲಿದೆ.

ಕಳೆದ ಅಕ್ಟೋಬರ್ ೨೫ ರಂದು ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಿದ್ದು, ಇದೀಗ ಇಂದಿನ ಹುಣ್ಣಿಮೆಯಂದು ಚಂದ್ರನು ಭೂಮಿಯ ಹಿಂದೆ ಸರಿದು ಸೂರ್ಯನಿಂದ ಸೃಷ್ಟಿಯಾಗುವ ಭೂಮಿಯ ನೆರಳಿಗೆ ಅಡ್ಡ ಬರುವ ಪರಿಣಾಮ ಚಂದ್ರಗ್ರಹಣ ಸಂಭವಿಸಲಿದೆ.

ಇಂದಿನ ಗ್ರಹಣದ ಸ್ಪರ್ಶಕಾಲವು (ಭೂಮಿಯ ನೆರಳು ಚಂದ್ರನಿಗೆ ಬೀಳಲಾರಂಭವಾಗುವ ಕ್ಷಣ) ಮಧ್ಯಾಹ್ನ ೨:೪೧ ಕ್ಕೆ ಪ್ರಾರಂಭವಾಗಲಿದೆ. ಈ ಸಮಯದಿಂದ ೩:೫೨ ವರೆಗೆ (ಗ್ರಹಣ ಸಮ್ಮಿಲನ ಕಾಲದವರೆಗೆ) ಚಂದ್ರನು ಭೂಮಿಯ ‘ಪೆನಂಬ್ರ’ (ನೇರ ವಲ್ಲದ ನೆರಳು - ಚಿತ್ರ ಗಮನಿಸಿ) ದಲ್ಲಿರಲಿದ್ದಾನೆ.

೩:೫೨ರ ಬಳಿಕ ‘ಅಂಬ್ರ’ (ನೇರ ನೆರಳು - ಚಿತ್ರ ಗಮನಿಸಿ)ದತ್ತ ಚಂದ್ರ ತೆರಳಲಿದ್ದು ೪:೩೨ ಕ್ಕೆ ಗ್ರಹಣ ಮಧ್ಯಕಾಲ ಸಂಭವಿಸಲಿದೆ. ಈ ಸಮಯದಲ್ಲಿ ಚಂದ್ರನು ಸಂಪೂರ್ಣ ವಾಗಿ ಈ ಅಂಬ್ರ ನೆರಳಿನಿಂದ ಆವೃತನಾಗಿರುತ್ತಾನೆ. ಸುಮಾರು ೫:೧೪ರವರೆಗೆ (ಗ್ರಹಣ ಉನ್ಮೀಲನ ಕಾಲದವರೆಗೆ) ಈ ಅಂಬ್ರ ನೆರಳಿನಲ್ಲೇ ಇರಲಿದ್ದು, ಬಳಿಕ ಪೆನಂಬ್ರ ನೆರಳಿನೆಡೆಗೆ ಸಾಗಲಿದ್ದಾನೆ. ಸುಮಾರು ೬:೨೨ರವರೆಗೆ ಪೆನಂಬ್ರದಲ್ಲಿ ಚಂದ್ರನಿರಲಿದ್ದು, ನಂತರ ಗ್ರಹಣ ಮೋಕ್ಷವಾಗಲಿದೆ.

‘ಬ್ಲಡ್ ಮೂನ್’

ಇಂದು ಸಂಪೂರ್ಣ ಚಂದ್ರ ಗ್ರಹಣವಾಗಿರುವ ಕಾರಣ ಚಂದ್ರನು ‘ಅಂಬ್ರ’ದಲ್ಲಿರುವ ಸಂದರ್ಭ ಕೆಂಪಗೆ ಕಂಗೊಳಿಸಲಿದ್ದಾನೆ. ಈ ಸಂದರ್ಭದಲ್ಲಿ ಚಂದ್ರನು ನೇರವಾಗಿ ಸೂರ್ಯ ಹಾಗೂ ಭೂಮಿಯ ಹಿಂಬದಿ ಇರಲಿರುವ ಕಾರಣ ಭೂಮಿಯಲ್ಲಿನ ವಾತಾವರಣವು ಸೂರ್ಯನ ಕಿರಣಗಳನ್ನು ಪಸರಿಸುವ ಕಾರಣ ಭೂಮಿಯ ಪಶ್ಚಿಮದಲ್ಲಿನ ಸೂರ್ಯಾಸ್ತದ ಕೆಂಪು ಹಾಗೂ ಭೂಮಿಯ ಪೂರ್ವದಲ್ಲಿನ ಸೂರ್ಯೋದಯದ ಕೆಂಪು ಬಣ್ಣದ ಕಿರಣಗಳು ಚಂದ್ರನನ್ನು ಕೆಂಪಗೆ ಮಾಡಲಿವೆ.

(ಮೊದಲ ಪುಟದಿಂದ) ೩:೫೨ ರಿಂದ ೫:೧೪ ವರೆಗೆ ಮಾತ್ರ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಆದ್ದರಿಂದ ‘ಬ್ಲಡ್ ಮೂನ್’ ಎಂಬ ಹೆಸರು.

ಭಾರತದಲ್ಲಿ ವಿರಳ

ಭಾರತದಲ್ಲಿ ಇಂದು ಸಂಜೆ ೬ ಗಂಟೆಗೆ(ಭಾರತದ ಅಧಿಕೃತ ಸಮಯ) ಚಂದ್ರೋದಯವಾಗಲಿರುವ ಕಾರಣ ಗ್ರಹಣದ ಪ್ರಮುಖ ಆಕರ್ಷಣೆಯಾಗಿರುವ ಕೆಂಪು ಚಂದ್ರನನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರತದ ಪೂರ್ವ ಭಾಗದಲ್ಲಿರುವ ಕೆಲ ರಾಜ್ಯಗಳಲ್ಲಿ ಚಂದ್ರ ಬೇಗ ಉದಯವಾಗುವ ಕಾರಣ, ಈ ಕೆಂಪು ಚಂದ್ರನು ಕೆಲ ಹೊತ್ತು ಗೋಚರಿಸುವ ಸಾಧ್ಯತೆಗಳಿವೆ. ಆದರೆ ಭಾರತದ ಇತರೆಡೆ ಕೆಂಪು ಚಂದ್ರ ಕಾಣದಿದ್ದರೂ ವಿರಳವಾಗಿ ಅಲ್ಪಕಾಲ ಗ್ರಹಣ ಗೋಚರಿಸಲಿದೆ. ಗ್ರಹಣ ೬:೨೨ರವರೆಗೂ ಸಕ್ರಿಯವಾಗಿರಲಿದ್ದು, ಇಂದು ಚಂದ್ರೋದಯ ಸಂಜೆ ೬ ಗಂಟೆಗೆ ಸಂಭವಿಸಲಿದ್ದರೂ ಕೂಡ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಇಷ್ಟು ಹೊತ್ತಿಗೆ ಚಂದ್ರ ಗೋಚರ ಕಷ್ಟಸಾಧ್ಯವಾಗಲಿದೆ.

ಗ್ರಹಣದ ಫಲಾಫಲಗಳು

ಪ್ರಸ್ತುತ ಚಂದ್ರನಿಗೆ ರಾಹು ಗ್ರಹಣವು ಭರಣಿ ನಕ್ಷತ್ರ ಮೇಷ ರಾಶಿಯಲ್ಲಿ ಸಂಭವಿಸಲಿದೆ. ಈ ಗ್ರಹಣವು ಭರಣಿ, ಉತ್ತರಾ , ಪೂರ್ವಾಷಾಡ, ಅಶ್ವಿನಿ, ಕೃತಿಕಾ ನಕ್ಷತ್ರದವರಿಗೂ ಮೇಷ, ವೃಷಭ, ಕನ್ಯಾ ರಾಶಿಯವರಿಗೂ ದೋಷವೆಂದು ಭಾವಿಸಲಾಗಿದೆ. ಈ ನಕ್ಷತ್ರ ರಾಶಿಯವರು ಗ್ರಹಣಾನಂತರ ಸ್ನಾನಾದಿಗಳ ಬಳಿಕ ತಮ್ಮ ಗೃಹಗಳಲ್ಲಿ ದೀಪ ಬೆಳಗಿ ಇಷ್ಟದೇವತಾ ಪ್ರಾರ್ಥನೆ ಮಾಡಿದರೆ ಸೂಕ್ತ. ಅಲ್ಲದೆ ಈ ಶ್ಲೋಕವನ್ನು ಪಠಿಸಿದರೆ ಒಳಿತಾಗುತ್ತದೆ:

“ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನ |

ವಿಷಮಸ್ಥಾನ ಸಂಭೂತಾA ಪೀಡಾಂ ಹರತು ಮೇ ವಿಧು ||

ಮಹಾಶೀರ್ಷೋಮಹಾವಕ್ತೊçà ದೀರ್ಘದಂಷ್ಟ್ರೋ ಮಹಾಬಲ |

ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮ ||”

ಮರುದಿನ ಆಸಕ್ತರು ದೇಗುಲಗಳಿಗೆ ತೆರಳಿ ಪೂಜೆ ಮಾಡಿಸಬಹುದು. ಉಳಿದಂತೆ ನಂಬಿಕೆ ಇರುವವರು ಗ್ರಹಣ ದಿನ ಪೂರ್ವಾಹ್ನ ೧೧ ಗಂಟೆಯೊಳಗೆ ಆಹಾರ ಸೇವನೆ ಮಾಡುವುದು ಒಳಿತು. ಗ್ರಹಣ ಮೋಕ್ಷಕಾಲವಾದ ಸಂಜೆ ೬:೨೨ ಗಂಟೆ ಬಳಿಕ ಸ್ನಾನ ಮಾಡಿ ಮತ್ತೆ ಆಹಾರ ಸೇವಿಸಬಹುದು. -ಪಿ.ಜಿ.ಆರ್