ಸಿದ್ದಾಪುರ, ನ.೭: ವಾಲ್ನೂರು ಅಮ್ಮಂಗಾಲ ಗ್ರಾಮದ ಕೃಷಿಕ ಚಂದಪAಡ ಮದನ್ ಕಾರ್ಯಪ್ಪ ಅವರ ಕೃಷಿ ಗದ್ದೆಗೆ ಕಳೆದ ಒಂದು ವಾರದ ಹಿಂದೆ ಕಾಡಾನೆ ದಾಳಿ ಮಾಡಿದ್ದು ಭತ್ತದ ನಾಟಿ ತುಳಿದು ನಾಶಗೊಳಿಸಿತ್ತು. ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾಡಾನೆಗಳು ಕೃಷಿ ನಾಶ ಮಾಡದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ನಿನ್ನೆ ರಾತ್ರಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು ಉಳಿದ ಫಸಲನ್ನೂ ತುಳಿದು ನಾಶ ಮಾಡಿದ್ದು, ಗ್ರಾಮದ ಕೃಷಿಕರು ಕಂಗಾಲಾಗಿದ್ದಾರೆ.

ಅರಣ್ಯದಿಂದ ಕಾಡಾನೆಗಳು ಗ್ರಾಮಕ್ಕೆ ಬರುವುದನ್ನು ತಡೆಯಲು ಹಾಕಿದ್ದ ಸೋಲಾರ್ ಬೇಲಿಯ ಕಂಬಗಳನ್ನು ಮುರಿದು ಗದ್ದೆಗೆ ನುಗ್ಗಿದ ಕಾಡಾನೆಗಳು ಫಸಲನ್ನು ನಾಶಗೊಳಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾಡಾನೆಗಳು ಗ್ರಾಮಕ್ಕೆ ನುಸುಳಲು ಪ್ರಮುಖ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಡಾನೆಗಳ ನಿರಂತರ ದಾಳಿಯಿಂದಾಗಿ ಕೃಷಿ ಮಾಡುವುದನ್ನೇ ಕೃಷಿಕರು ಕೈ ಬಿಡುವ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಯಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾಡಾನೆ ತಡೆಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ ಅಧಿಕಾರಿಗಳು ಅದರ ಸಮರ್ಪಕ ಬಳಕೆ ಮಾಡದೆ ಕಳಪೆ ಗುಣಮಟ್ಟದ ಸೋಲಾರ್ ಬೇಲಿ, ಹಾಂಗಿAಗ್ ಫೆನ್ಸ್, ಆನೆ ಕಂದಕ, ಸ್ರೆöÊಕ್‌ಗೇಟ್ ಮುಂತಾದ ಕಾಮಗಾರಿಗಳನ್ನು ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಡಾನೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಅರಣ್ಯ ಇಲಾಖೆಯ ಕಚೇರಿ ಎದುರು ಕೃಷಿಕರ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.