ಸೋಮವಾರಪೇಟೆ, ನ. ೭: ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು ಹೋರಾಟಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ತಾಲೂಕಿನ ಕೂಡುರಸ್ತೆ, ತೋಳೂರುಶೆಟ್ಟಳ್ಳಿ, ಎಡದಂಟೆ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಹೋರಾಟ ನಡೆಸಲು ತೋಳೂರುಶೆಟ್ಟಳ್ಳಿ ರಸ್ತೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಕಳೆದ ಅನೇಕ ದಶಕಗಳ ಬೇಡಿಕೆ ಯಾಗಿರುವ ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ-ಕೂತಿ- ಎಡದಂಟೆ ರಸ್ತೆ ಅಗಲೀಕರಣವು ಮರೀಚಿಕೆಯಾದ ಹಿನ್ನೆಲೆ ಇದೀಗ ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದು, ಇದಕ್ಕಾಗಿ ಸಮಿತಿ ರಚಿಸಿದ್ದಾರೆ.

ತೋಳೂರುಶೆಟ್ಟಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಅಲ್ಲಿನ ಸಹಕಾರ ಸಂಘ ಸಭಾಂಗಣದಲ್ಲಿ ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಲೋಕೋಪಯೋಗಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿ ಸಾಕಾಗಿದೆ. ರಾಜ್ಯ ಹೆದ್ದಾರಿಯಾಗಿದ್ದರೂ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗವಿದೆ. ರಸ್ತೆ ಅಗಲೀಕರಣವಾಗುವ ತನಕ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹೇಳಿದರು.

ರಸ್ತೆ ಅಗಲೀಕರಣದ ಬೇಡಿಕೆಯೂ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಈ ಹಿಂದೆ ಚುನಾವಣೆಯನ್ನೂ ಬಹಿಷ್ಕರಿಸಲಾಗಿತ್ತು. ಅಂದು ಭೇಟಿ ನೀಡಿದ ತಾಲೂಕು ತಹಶೀಲ್ದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ರಸ್ತೆ ಅಗಲೀಕರಣದ ಭರವಸೆ ನೀಡಿದ್ದರು. ಆದರೆ ಈವರೆಗೆ ಈಡೇರಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರಪೇಟೆಯಿಂದ ಕಲ್ಕಂದೂರು, ತೋಳೂರುಶೆಟ್ಟಳ್ಳಿ, ಕೂತಿ ಮಾರ್ಗವಾಗಿ ಸುಬ್ರಮಣ್ಯ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ರಸ್ತೆ ಹಾಳಾಗಿ ಸಂಚಾರಕ್ಕೆ ಸಂಚಕಾರವಾಗಿದ್ದರೂ ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಸಮಸ್ಯೆಯಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಹೋರಾಟಕ್ಕೆ ತಕ್ಷಣ ರೂಪುರೇಷೆ ಸಿದ್ಧಗೊಳಿಸಬೇಕೆಂದು ಪಿ.ಕೆ.ಮಾಚಯ್ಯ ಅಭಿಪ್ರಾಯಿಸಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ಹೋರಾಟಕ್ಕೆ ಸಿದ್ಧತೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಮುಖರಾದ ಐ.ಪಿ.ನಿಂಗಪ್ಪ, ಈರಪ್ಪ, ಬಿ.ಎಂ.ಲವ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.