*ಗೋಣಿಕೊಪ್ಪಲು, ನ. ೮: ಅಕ್ರಮವಾಗಿ ಗಾಂಜಾವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಅಬಕಾರಿ ಇಲಾಖೆ ಬಂದಿಸುವಲ್ಲಿ ಯಶಸ್ವಿಯಾಗಿದೆ. ಗೋಣಿಕೊಪ್ಪಲಿನ ಕೆ.ಎಂ. ಖಾಲಿದ್ ಎಂಬಾತನೇ ಬಂಧಿತ ಆರೋಪಿ.
ಗೋಣಿಕೊಪ್ಪಲು ಬೈಪಾಸ್ ರಸ್ತೆಯಲ್ಲಿರುವ ಮೈಸೂರಮ್ಮ ಕಾಲೋನಿಗೆ ತೆರಳುವ ರಸ್ತೆಯಲ್ಲಿ ಆರೋಪಿ ಖಾಲಿದ್ ತನ್ನ ಬಳಿ ಇದ್ದ ೧೦೦ಗ್ರಾಂ ತೂಕದ ಒಣ ಗಾಂಜಾವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದ. ಇದರ ಸುಳಿವರಿತ ವೀರಾಜಪೇಟೆ ಉಪವಿಭಾಗದ ಅಬಕಾರಿ ನಿರೀಕ್ಷಕಿ ಭಾಗ್ಯ ಅವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
(ಮೊದಲ ಪುಟದಿಂದ) ಬಂಧಿತ ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೊಡಗು ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ವೀರಾಜಪೇಟೆ ಉಪವಿಭಾಗದ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ಎಚ್.ಸಿ. ಚಂದ್ರ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.