ಸಿದ್ದಾಪುರ, ನ. ೮: ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಗ್ರಾ. ಪಂ. ಸಹಭಾಗಿತ್ವದಲ್ಲಿ ನಾಗರಿಕ ಮತ್ತು ಮಹಿಳಾ ಸಬಲೀಕರಣ ಅಭಿಯಾನದ ಭಾಗವಾಗಿ ಕಾನೂನಿನ ನೆರವು, ಅರಿವು ಮತ್ತು ಸಂವಾದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.

ಅಧ್ಯಕ್ಷೆ ರೀನಾ ತುಳಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀರಾಜಪೇಟೆ ತಾಲೂಕು ನ್ಯಾಯಾಲಯದ ವಕೀಲ ಎ.ಆರ್ ರಂಜನ್ ಮಹಿಳೆಯರ ಹಕ್ಕು ಮತ್ತು ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಅಧ್ಯಕ್ಷೆ ರೀನಾ ತುಳಸಿ ಮಾತನಾಡಿ, ಸರಕಾರ ಮಹಿಳೆಯರ ಸಬಲೀಕರಣ ಮತ್ತು ಹಕ್ಕುಗಳ ರಕ್ಷಣೆಗಾಗಿ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಾಗ ಕಾನೂನಿನ ಸಹಾಯದ ಮೂಲಕ ನ್ಯಾಯ ದೊರಕಿಸಿ ಕೊಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಕಾನೂನಿನ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ಮೂಲಕ ತಮ್ಮ ಸಂದೇಹವನ್ನು ಬಗೆ ಹರಿಸಿಕೊಂಡರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್, ಸದಸ್ಯರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೇವಜಾನು, ಸುಮತಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಯಮುನಾ, ವಾಸಂತಿ, ಪಾರ್ವತಿ, ಸೇರಿದಂತೆ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಜರಿದ್ದರು.