ಪೊನ್ನಂಪೇಟೆ, ನ.೭: ಇತ್ತೀಚೆಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಮತ್ತೊಂದು ಅಪರೂಪದ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಗೋಣಿಕೊಪ್ಪಲು ಕಡೆಯಿಂದ ಬರುವವರಿಗೆ ಪೊನ್ನಂಪೇಟೆ ಪಟ್ಟಣಕ್ಕೆ ಸ್ವಾಗತ ಕೋರುತಿದ್ದ ಕಸ ಸಂಗ್ರಹ ಸ್ಥಳವನ್ನು ಸುಂದರ ಉದ್ಯಾನವನವನ್ನಾಗಿ ಪರಿವರ್ತಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ.

ಪಟ್ಟಣದ ಕಸ ಸುರಿಯುತಿದ್ದ ಸ್ಥಳವೊಂದನ್ನು ಉದ್ಯಾನವನವನ್ನಾಗಿ ಪರಿವರ್ತಿಸುತ್ತಿರುವ ಕಾರ್ಯವನ್ನು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಕೈಗೆತ್ತಿಕೊಂಡಿದ್ದು, ಕಸ ಸುರಿಯುತಿದ್ದ ಸ್ಥಳ ಉದ್ಯಾನವನವಾಗಿ ಮಾರ್ಪಡಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಥಮ ಎನ್ನಲಾಗಿದೆ. ಕಸದಿಂದ ತುಂಬಿದ್ದ ಸ್ಥಳವನ್ನು ಈಗಾಗಲೇ ಸ್ವಚ್ಛಗೊಳಿಸಿ, ಸ್ಥಳವನ್ನು ಜೆಸಿಬಿಯಿಂದ ಸಮತಟ್ಟು ಮಾಡಲಾಗಿದೆ. ಉದ್ಯಾನವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಈ ಸ್ಥಳದಲ್ಲಿ ಸುಂದರವಾದ ಸಾರ್ವಜನಿಕ ಉದ್ಯಾನವನ ರೂಪುಗೊಳ್ಳಲಿದೆ ಎಂದು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ತಿಳಿಸಿದ್ದಾರೆ.

ರೂ. ೨೫ ಸಾವಿರ ದಂಡ

ಉದ್ಯಾನವನ ಮಾಡಲು ಸಜ್ಜುಗೊಳಿಸಿರುವ ಸ್ಥಳದಲ್ಲಿ ಸಾರ್ವಜನಿಕರು, ಕಸ ಎಸೆಯದಂತೆ ಗ್ರಾಮ ಪಂಚಾಯಿತಿ ಮನವಿ ಮಾಡಿಕೊಂಡಿದೆ. ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದ್ದು, ನಿಯಮ ಉಲ್ಲಂಘಿಸಿ ಕಸ ಎಸೆಯುವವರಿಗೆ ೨೫ ಸಾವಿರ ದಂಡ ವಿಧಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ. -ಚನ್ನನಾಯಕ