*ಗೋಣಿಕೊಪ್ಪ, ನ. ೬: ಕೊಡಗಿನಾದ್ಯಂತ ಸಂಚರಿಸಿದ ಕೆಂಪೇಗೌಡ ಪ್ರತಿಮೆ ಅನಾವರಣದ ಮೃತ್ತಿಕೆ ಸಂಗ್ರಹ ಅಭಿಯಾನದ ರಥಯಾತ್ರೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪವಿತ್ರ ಮಣ್ಣು ಸಂಗ್ರಹಿಸಿ ಹುಣಸೂರು ಮಾರ್ಗ ಸಂಚರಿಸುವ ಮೂಲಕ ಕೊಡಗಿನಲ್ಲಿ ಮಣ್ಣು ಸಂಗ್ರಹದ ಯಾತ್ರೆಯನ್ನು ಸಮಾಪ್ತಿಗೊಳಿಸಿದೆ.
ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ನೇತೃತ್ವದಲ್ಲಿ ರಥ ಜಿಲ್ಲೆಯಾದ್ಯಂತ ಸಂಚರಿಸಿ ಪವಿತ್ರ ಮಣ್ಣನ್ನು ಸಂಗ್ರಹಿಸಲು ಸಾಧ್ಯವಾಗಿದೆ.
ಗುರುವಾರ ಬೆಳಿಗ್ಗೆ ಬಿ. ಶೆಟ್ಟಿಗೇರಿ ಗ್ರಾಮದ ಮೂಲಕ ಹುದಿಕೇರಿ, ಬಿರುನಾಣಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಕೆ. ಬಾಡಗ, ನಾಲ್ಕೇರಿ, ಕಾನೂರು, ನಿಟ್ಟೂರು, ಬಾಳೆಲೆ, ಕಿರುಗೂರು, ಪೊನ್ನಪ್ಪಸಂತೆ, ಮಾಯಮುಡಿ, ದೇವರಪುರದ ಮೂಲಕ ತಿತಿಮತಿ ತಲುಪಿದ ರಥ ಈ ಗ್ರಾಮದ ಪವಿತ್ರ ಮಣ್ಣನ್ನು ಸಂಗ್ರಹಿಸಿ ರಥಯಾತ್ರೆಯನ್ನು ಮುಂದುವರೆಸಿದೆ.
ಗೋಣಿಕೊಪ್ಪ ಪಟ್ಟಣದಲ್ಲಿ ರಥ ಆಗಮಿಸುತ್ತಿದ್ದಂತೆ, ಪೂರ್ಣ ಕುಂಭಗಳನ್ನು ಹಿಡಿದು ಮಹಿಳೆಯರು ಸ್ವಾಗತ ಕೋರಿದರು.
ಸಮುದಾಯ ಆರೋಗ್ಯ ಕೇಂದ್ರದಿAದ ಬಸ್ ನಿಲ್ದಾಣದವರೆಗೆ ಮೆರವಣಿಗೆಯ ಮೂಲಕ ರಥವನ್ನು ಅದ್ಧೂರಿಯಾಗಿ ಕರೆತಂದು ಪವಿತ್ರ ಮಣ್ಣನ್ನು ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ನೇತೃತ್ವದಲ್ಲಿ ನೀಡಲಾಯಿತು.
ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಮಹಿಳಾ ಮಕ್ಕಳ ಇಲಾಖೆ ಅಧಿಕಾರಿ ರಾಜೇಶ್, ಬಗರ್ ಹುಕುಂ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಖಜಾಂಚಿ ಗುಮ್ಮಟೀರ ಕಿಲನ್ ಗಣಪತಿ, ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್ ಇದ್ದರು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಗಿರಿಜಾ ವೆಂಕಟೇಶ್ ಮತ್ತು ಉಪಾಧ್ಯಕ್ಷೆ ದಶಮಿ ಸದಾ ನೇತೃತ್ವದಲ್ಲಿ ಮಣ್ಣನ್ನು ರಥಕ್ಕೆ ನೀಡಿದರು.
ಅರುವತ್ತೊಕ್ಲು ಪಂಚಾಯಿತಿ ವತಿಯಿಂದ ಮಣ್ಣನ್ನು ರಥಕ್ಕೆ ನೀಡಲಾಯಿತು.
ಇದೇ ಸಂದರ್ಭ ಕೈಕೇರಿ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಮೆಯ ಅಭಿಯಾನ ರಥಕ್ಕೆ ಸ್ವಾಗತ ಕೋರಿ ಆರತಿ ಬೆಳಗಿದರು.