ಕಣಿವೆ, ನ. ೬: ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಇದರಿಂದಾಗಿ ಪಾದಚಾರಿಗಳು ಹಾಗೂ ವಾಹನ ಸವಾರರ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಹೀಗಿದ್ದಾಗ್ಯೂ ಪಂಚಾಯಿತಿ ಆಡಳಿತ ಮಾತ್ರ ರಸ್ತೆಗಳ ಗುಂಡಿ ಮುಚ್ಚುವಲ್ಲಿ ನಿರ್ಲಕ್ಷö್ಯ ವಹಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕುಶಾಲನಗರದ ಗುಂಡೂರಾವ್ ಬಡಾವಣೆ ರಸ್ತೆ, ರೈತ ಭವನದ ರಸ್ತೆ, ಬೈಚನಹಳ್ಳಿಯ ಕಾವೇರಿ ನದಿ ರಸ್ತೆ, ದಂಡಿನಪೇಟೆ ರಸ್ತೆ, ಭಾರತ ಗ್ಯಾಸ್ ಸೋಮೇಶ್ವರ ದೇಗುಲ ಸಂಪರ್ಕ ರಸ್ತೆ ಹೀಗೆ ಒಂದಲ್ಲ ಎರಡಲ್ಲ. ಇಡೀ ಪಟ್ಟಣದ ಸಂಪರ್ಕ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಬೈಚನಹಳ್ಳಿಯಿಂದ ಗುಂಡೂರಾವ್ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಂತು ಜನ ವಸತಿ ಪ್ರದೇಶದ ತ್ಯಾಜ್ಯ ನೀರು ಹರಿಯಲು ಸೂಕ್ತ ಚರಂಡಿ ಇಲ್ಲದ ಕಾರಣ ರಸ್ತೆಯನ್ನೇ ಸೀಳಿ ಹಳ್ಳದತ್ತ ಹರಿಯುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಧರಿಸುವ ಸಮವಸ್ತçಗಳ ಮೇಲೆ ಇಲ್ಲಿನ ತ್ಯಾಜ್ಯ ನೀರು ಸಂಚರಿಸುವ ವಾಹನಗಳ ಟಯರ್ಗಳ ಮೂಲಕ ಸಮಸ್ಯೆ ಸೃಷ್ಟಿಸುತ್ತಿದೆ. ಆದ್ದರಿಂದ ಪಟ್ಟಣ ಪಂಚಾಯಿತಿ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ತಾತ್ಕಾಲಿಕವಾದರೂ ಕೂಡ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕಿದೆ.