ಸುಂಟಿಕೊಪ್ಪ, ನ. ೬: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಏರ್ಪಡಿಸಲಾದ ಕ್ರೀಡಾಕೂಟವನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಉದ್ಘಾಟಿಸಿದರು.
ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ವೇಣುಗೋಪಾಲ್ ಕ್ರೀಡಾ ಚಟುವಟಿಕೆಯಿಂದ ಸಮುದಾಯ ಬಾಂಧವರು ಒಟ್ಟಾಗಿ ಸೇರಿ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರೂಪ ಕ್ರೀಡಾಕೂಟದಲ್ಲಿ ಎಲ್ಲಾ ಕ್ರೀಡಾಪಟುಗಳು ಕ್ರೀಡಾಸ್ಫ್ಪೂರ್ತಿಯಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಿ ವಿಶ್ಮಿತ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಗೌರವ ಅಧ್ಯಕ್ಷ ಬಿ.ಕೆ. ಮೋಹನ್ ಮಾತನಾಡಿದರು.
ಗುಡ್ಡೆಹೊಸೂರು ಉಪಾಧ್ಯಕ್ಷ ನಾಗೇಶ್ ಪೂಜಾರಿ, ದೇವಪ್ಪ, ಖಜಾಂಜಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಹರೀಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಶೇಖರ್ ಪೂಜಾರಿ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಮಹಿಳಾ ಉಪಾಧ್ಯಕ್ಷೆ ಗೀತಾ ವಿಶ್ವನಾಥ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಮೊದಲಿಗೆ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ಸ್ವಾಗತಿಸಿ, ಎಂ.ಎಸ್.ಸುನಿಲ್ ಪೂಜಾರಿ ನಿರೂಪಿಸಿ, ಜಯಂತಿ ಕೃಷ್ಣಪ್ಪ ವಂದಿಸಿದರು.