ಮಡಿಕೇರಿ, ನ. ೫: ಕನ್ನಡ ನಾಡು ಸಾವಿರಾರು ವರ್ಷಗಳಿಂದ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ತನ್ನದೇ ಪರಂಪರೆ ಹೊಂದಿದೆ. ಇಂದು ಇದ್ದಂತೆ ಸ್ವಾತಂತ್ರ್ಯ ಪೂರ್ವದಲ್ಲಿ ಈ ರೀತಿ ಇರಲಿಲ್ಲ; ಏಕೀಕರಣದ ಹೋರಾಟದ ಮೂಲಕ ಇದನ್ನು ಪಡೆಯಬೇಕಾಯಿತು ಎಂದು ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನ ಉಪನ್ಯಾಸಕಿ ಎಸ್.ಎಂ. ರಜಿನಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಮತ್ತು ಸರ್ವ ದೈವತಾ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬಿ.ಆರ್. ಸಾಯಿನಾಥ್ ದತ್ತಿ ಮತ್ತು ದಿ. ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕಿನ ಅರುವತೋಕ್ಲು ಗ್ರಾಮದ ಸರ್ವದೈವತಾ ಶಾಲೆಯ ಸಭಾಂಗಣದಲ್ಲಿ ಉಪನ್ಯಾಸ ನೀಡಿದರು. ಭಾರತಾಂಬೆ ಎಲ್ಲರಿಗೂ ಹೆಮ್ಮೆಯ ತಾಯಿ, ಕನ್ನಡಾಂಬೆ ಭಾರತಾಂಬೆಯ ಹಿರಿಯ ಮಗಳು. ಇತರ ಎಲ್ಲಾ ರಾಜ್ಯಗಳು ಕನ್ನಡಾಂಬೆಯ ಸಹೋದರಿಯರ ಅತ್ಯಂತ ಸುಭಿಕ್ಷೆಯ ನಾಡು ಕರ್ನಾಟಕ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ವ ದೈವತಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಲಲಿತಾ ಮೊಣ್ಣಪ್ಪ ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ ನಮ್ಮ ಶಾಲೆಯಲ್ಲಿ ಸಾಹಿತ್ಯದ ಕುರಿತು ರಸಪ್ರಶ್ನೆ ಮತ್ತು ರಾಜ್ಯೋತ್ಸವದ ಭಾಷಣ ಸ್ಪರ್ಧೆ ಏರ್ಪಡಿಸಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡದ ನಾಡು ನುಡಿ ಪರಂಪರೆಯನ್ನು, ಸಾಹಿತ್ಯದ ಮತ್ತು ರಾಜ್ಯೋತ್ಸವದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿಕೊಟ್ಟಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಬಿ.ಆರ್. ಸಾಯಿನಾಥ್ ಅವರು ಸಾಹಿತ್ಯದ ಕುರಿತು ಮಕ್ಕಳಿಗೆ ಮಾಹಿತಿ ನೀಡಬೇಕು ಮತ್ತು ಸಾಹಿತ್ಯದ ಆಳ ವಿದ್ಯಾರ್ಥಿಗಳಿಗೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ರಸಪ್ರಶ್ನೆಯನ್ನು ಏರ್ಪಡಿಸುವಂತೆ ಸಾಹಿತ್ಯ ಪರಿಷತ್ನಲ್ಲಿ ದತ್ತಿ ಸ್ಥಾಪಿಸಿರುತ್ತಾರೆ. ಜಿಲ್ಲೆಯ ಹಿರಿಯ ಸಾಹಿತಿಗಳಾಗಿದ್ದ ದಿ. ಬಿ.ಎಸ್. ರಾಮಕೃಷ್ಣ ಅವರು ಕನ್ನಡ ರಾಜ್ಯೋತ್ಸವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಭಾಷಣ ಸ್ಪರ್ಧೆ ಮತ್ತು ಉಪನ್ಯಾಸ ಏರ್ಪಡಿಸುವಂತೆ ದತ್ತಿ ಸ್ಥಾಪಿಸಿದ್ದು, ಯುವ ಪೀಳಿಗೆಗೆ ಕನ್ನಡ ಸಾಹಿತ್ಯದ ಕನ್ನಡ ನಾಡು ನುಡಿಯ ಪರಿಚಯವನ್ನು ಮಾಡಿಕೊಡುವ ನಿಟ್ಟಿನಲ್ಲಿ ಸಹಕಾರ ನೀಡಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಪೊನ್ನಂಪೇಟೆ ಹೋಬಳಿಯ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಿ.ಆರ್. ಸಾಯಿನಾಥ್ ದತ್ತಿ ನಿಧಿಯ ಸಾಹಿತ್ಯದ ಕುರಿತು ರಸಪ್ರಶ್ನೆಯಲ್ಲಿ ಮತ್ತು ಜಿಲ್ಲೆಯ ಹಿರಿಯ ಸಾಹಿತಿಗಳಾಗಿದ್ದ ದಿ. ವಿ.ಎಸ್. ರಾಮಕೃಷ್ಣ ದತ್ತಿಯಂತೆ ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಪದವಿಪೂರ್ವ, ಪ್ರೌಢಶಾಲಾ, ಹಿರಿಯ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ೮೦ ವಿದ್ಯಾರ್ಥಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊನ್ನಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡುತ್ತಾ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಸುವ ಸಲುವಾಗಿ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಎಲ್ಲರ ಸಹಕಾರ ಕೋರಿದರು.
ಶಾಲಾ ಮುಖ್ಯ ಶಿಕ್ಷಕಿಯೂ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆದ ಮನೆಯಪಂಡ ಶೀಲಾ ಬೋಪಣ್ಣ ನಿರೂಪಿಸಿ, ವಂದಿಸಿದರು.