ಸೋಮವಾರಪೇಟೆ, ನ. ೫: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದಿಂದ ಕಣಿವೆ ಸಂಪರ್ಕಿಸುವ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದರಿಂದ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ್ದರು. ಇದೀಗ ಪೊಲೀಸ್ ಭದ್ರತೆಯೊಂದಿಗೆ ಗುಂಡಿಮುಚ್ಚುವ ಕಾಮಗಾರಿ ನಡೆಯುತ್ತಿದೆ. ಮಸಗೋಡು-ಕಣಿವೆ ರಸ್ತೆಯು ಅನೇಕ ವರ್ಷಗಳಿಂದ ನಿರ್ವಹಣೆಯಿಲ್ಲದೇ

(ಮೊದಲ ಪುಟದಿಂದ) ಹೊಂಡಾಗುAಡಿಗಳ ಆಗರವಾಗಿತ್ತು. ಇದರೊಂದಿಗೆ ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದಲೂ ಸಹ ರಸ್ತೆ ಶಿಥಿಲಾವಸ್ಥೆಗೆ ತಲುಪಿತ್ತು.

ಈ ಬಗ್ಗೆ ಅನೇಕ ದಶಕಗಳಿಂದ ಸಂಬAಧಿಸಿದ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಶೂನ್ಯವಾಗಿತ್ತು. ಇದರಿಂದ ಬೇಸತ್ತ ಸ್ಥಳೀಯರು ‘ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ’ಯ ಹೆಸರಿನಲ್ಲಿ ಸಂಘಟಿತರಾಗಿ ಕಳೆದ ಅ. ೧೦ರಂದು ಎತ್ತಿನಗಾಡಿ ಸಹಿತ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.

ಪ್ರತಿಭಟನಾಕಾರರು ಲೋಕೋಪಯೋಗಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭ ಪೊಲೀಸರು ತಡೆಯೊಡ್ಡಿದ್ದರು. ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜ್ ಅವರು ಮುಂದಿನ ನವೆಂಬರ್ ಅಂತ್ಯದೊಳಗೆ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ತಕ್ಷಣಕ್ಕೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದ್ದರು.

ಅದರಂತೆ ಇದೀಗ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಕಿತ್ತುಬಂದಿರುವ ಸ್ಥಳದಲ್ಲಿ ಜೆಸಿಬಿಯಿಂದ ಅಗೆದು ಹೊಸದಾಗಿ ವೆಟ್‌ಮಿಕ್ಸ್ ಹಾಕಲಾಗುತ್ತಿದೆ. ಈ ಮಧ್ಯೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಅವರು ಡಿವೈಎಸ್‌ಪಿ ಕಚೇರಿಗೆ ದೂರು ನೀಡಿ, ಕಾಮಗಾರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿರುವುದು ಗ್ರಾಮಸ್ಥರು ಹಾಗೂ ರಸ್ತೆ ಹೋರಾಟ ಸಮಿತಿ ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೇವಲ ಗುಂಡಿಗಳನ್ನು ಮುಚ್ಚಿದರೆ ಸಾಲದು; ಮಸಗೋಡಿನಿಂದ ಕಣಿವೆವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ವೆಟ್‌ಮಿಕ್ಸ್ ಹಾಕಿದರಷ್ಟೇ ಸಾಲದು; ಅದನ್ನು ರೋಲ್ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.

ಹಲವು ದಶಕಗಳಿಂದ ಗುಂಡಿಬಿದ್ದ ರಸ್ತೆಯಲ್ಲೇ ಓಡಾಡಿದ್ದೇವೆ. ಇದೀಗ ಪ್ರತಿಭಟನೆ ಮಾಡಿದ ನಂತರ ರಸ್ತೆಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮನಸ್ಸು ಮಾಡಿದೆ. ಈ ನಡುವೆ ಕೇವಲ ಗುಂಡಿ ಮುಚ್ಚಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ. ನಮಗೆ ಸರ್ವಋತು ರಸ್ತೆ ನಿರ್ಮಾಣ ಮಾಡಿ ಎಂದು ಒತ್ತಾಯ ಹಾಕಿದ್ದರಿಂದ, ಇಲಾಖಾಧಿಕಾರಿಗಳು ನಮ್ಮ ಮೇಲೆ ಪೊಲೀಸ್ ದೂರು ನೀಡಿದ್ದಾರೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಅವರು, ರಸ್ತೆ ಕಾಮಗಾರಿ ನಿರ್ವಹಿಸಲು ಸ್ಥಳೀಯರು ಅಡ್ಡಿಪಡಿಸುತ್ತಿದ್ದು, ಪೊಲೀಸ್ ಭದ್ರತೆ ಒದಗಿಸುವಂತೆ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದರಿಂದ ಡಿವೈಎಸ್‌ಪಿ ಗಂಗಾಧರಪ್ಪ ಅವರು ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಕರೆದು ಮಾತುಕತೆ ನಡೆಸಿದ್ದಾರೆ.

ಹೋರಾಟದ ಫಲವಾಗಿ ರಸ್ತೆಗೆ ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಅಸಮರ್ಪಕವಾಗಿ ಗುಂಡಿಗಳನ್ನು ಮುಚ್ಚುವುದಕ್ಕೆ ಮಾತ್ರ ನಮ್ಮ ಅಭ್ಯಂತರವಿದೆ. ಇದನ್ನು ಹೊರತುಪಡಿಸಿ ರಸ್ತೆಯ ಗುಂಡಿ ಮುಚ್ಚುವುದು, ಚರಂಡಿ ನಿರ್ಮಾಣಕ್ಕೆ ಯಾವುದೇ ತಡೆಯಿಲ್ಲ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳಾದ ಲೋಕೇಶ್, ಸಚಿನ್, ತಿಮ್ಮಯ್ಯ, ಪ್ರಶಾಂತ್, ರತನ್ ಸೇರಿದಂತೆ ಇತರರು ಡಿವೈಎಸ್‌ಪಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಇಲಾಖೆಯ ಅಭಿಯಂತರ ಮಹೇಂದ್ರಕುಮಾರ್ ಅವರು, ಮಸಗೋಡು-ಕಣಿವೆ ರಸ್ತೆ ತೀರಾ ಹದಗೆಟ್ಟಿದ್ದರಿಂದ ಸದ್ಯದ ಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗಿಸುವ ನಿಟ್ಟಿನಲ್ಲಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಸಂದರ್ಭ ಸ್ಥಳೀಯ ಕೆಲವರು ಆಕ್ಷೇಪಿಸಿ ಸಂಪೂರ್ಣ ರಸ್ತೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇಲಾಖೆಯಿಂದ ೧೩ ಕೋಟಿ ವೆಚ್ಚದ ಯೋಜನೆಗೆ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ಅನುದಾನ ಬಿಡುಗಡೆಯಾಗುವುದಾಗಿ ಶಾಸಕರು ತಿಳಿಸಿದ್ದಾರೆ. ಅನುದಾನ ಬಂದ ತಕ್ಷಣ ಸಂಪೂರ್ಣ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಗುಂಡಿಬಿದ್ದ ಸ್ಥಳದಲ್ಲಿ ಜೆಸಿಬಿಯಿಂದ ಅಗೆದು ವೆಟ್‌ಮಿಕ್ಸ್ ಹಾಕಲಾಗುತ್ತಿದೆ. ಆದರೆ ರೋಲರ್‌ನಿಂದ ರೋಲ್ ಮಾಡುತ್ತಿಲ್ಲ. ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಕೇಳಿದರೆ ನಮ್ಮ ವಿರುದ್ಧವೇ ಪೊಲೀಸ್ ದೂರು ನೀಡುತ್ತಾರೆ ಎಂದು ಹೋರಾಟ ಸಮಿತಿಯ ಲೋಕೇಶ್, ಎ.ಹೆಚ್. ತಿಮ್ಮಯ್ಯ ಹೇಳಿದ್ದಾರೆ.

ಇದೀಗ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಪೊಲೀಸರು ಭದ್ರತೆ ಒದಗಿಸಿದ್ದು, ಬೆಳಿಗ್ಗೆ ಕಾಮಗಾರಿ ಆರಂಭವಾಗುವ ಸಮಯಕ್ಕೆ ಹಾಜರಾಗಿ, ಸಂಜೆ ವೇಳೆಗೆ ವಾಪಸ್ ಆಗುತ್ತಿದ್ದಾರೆ. ಮೊದಲ ದಿನವಂತೂ ಮೀಸಲು ಪಡೆಯ ಒಂದು ತುಕಡಿಯನ್ನೇ ನಿಯೋಜಿಸಲಾಗಿತ್ತು. ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿಗೆ ಪೊಲೀಸ್ ಭದ್ರತೆ ನೀಡಿರುವುದರಿಂದ ಈ ರಸ್ತೆಯಲ್ಲಿ ಸಾಗುವ ಮಂದಿ ಆಶ್ಚರ್ಯದಿಂದ ನೋಡುವಂತಾಗಿದೆ.