ಸೋಮವಾರಪೇಟೆ, ನ. ೪: ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಚೇರಿ ನಿರ್ಮಾಣಕ್ಕೆ ಸದ್ಯದಲ್ಲಿಯೇ ಸ್ಥಳದ ವ್ಯವಸ್ಥೆ ಮಾಡಿಕೊಡುವುದರೊಂದಿಗೆ, ಕಟ್ಟಡ ನಿರ್ಮಿಸಲು ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳಗ್ಗಿನಿಂದ ಕಷ್ಟಪಟ್ಟು ದುಡಿಯುವ ಆಟೋ ಚಾಲಕರು ಸುರಕ್ಷಿತ ಜೀವನ ನಡೆಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ವಾಹನದ ದಾಖಲಾತಿ ಮತ್ತು ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ವಾಹನ ಚಾಲನೆ ಮಾಡಬೇಕೆಂದರು.

ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ಶ್ರಮಿಕ ವರ್ಗದಲ್ಲಿ ಗುರುತಿಸಿಕೊಂಡಿರುವ ಆಟೋ ಚಾಲಕರು ರಾಜ್ಯದಲ್ಲಿ ಕನ್ನಡ ಭಾಷೆ ಉಳಿವಿಗೆ ಹೆಚ್ಚಿನ ಕಾಣಿಕೆ ನೀಡುತ್ತಿದ್ದಾರೆ. ರಾಜ್ಯದ ನೆಲ, ಜಲ ಭಾಷೆಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಯಾವಾಗ ಶ್ರಮಿಕರ ಜೀವನ ಹಸನಾಗುವುದೋ ಅಂದು ದೇಶ ಸುಭೀಕ್ಷವಾಗುವುದು. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ವರ್ಗಕ್ಕೆ ಹಲವಾರು ಯೋಜನೆಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕೆಂದರು.

ಸಮಾರAಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪಾಣತ್ತಲೆ ಶಶಿಧರ್, ಕಾಂಗ್ರೆಸ್ ಮುಖಂಡರಾದ ಕೆ.ಪಿ. ಚಂದ್ರಕಲಾ, ಬಿ.ಎಸ್. ಅನಂತಕುಮಾರ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಉದ್ಯಮಿಗಳಾದ ವಿ.ಎಂ. ವಿಜಯ, ಗಿರೀಶ್ ಮಲ್ಲಪ್ಪ, ಬಿ.ಜೆ. ದೀಪಕ್, ಕೊಡಗು ಜಿಲ್ಲಾ ಕರವೆ ಅಧ್ಯಕ್ಷ ವೆಂಕಟೇಶ್ ಪೂಜಾರಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಸತೀಶ್‌ಕುಮಾರ್, ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಸಂಘದ ಮಾಜೀ ಅಧ್ಯಕ್ಷ ಮೋಹನ್, ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಮಾಜಿ ಸೈನಿಕ ಚಂದ್ರಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಕುಣಿಯೋಣ ಬಾರಾ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದ ಚಾಲಕರು ಹಾಗೂ ಅಲಂಕೃತ ಆಟೋಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.