ಕುಶಾಲನಗರ, ನ. ೪: ಕುಶಾಲನಗರ ಪ.ಪಂ. ವತಿಯಿಂದ ಸ್ವಚ್ಛ ಸರ್ವೇಕ್ಷಣ್ ೨೦೨೩ರ ಯೋಜನೆಗೆ ಚಾಲನೆ ನೀಡಲಾಯಿತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವುದರೊಂದಿಗೆ ಕಸ ಬೇರ್ಪಡಿಸುವಿಕೆ ಮಾರ್ಗ ಸೂಚಿಗಳನ್ನು ಜನರಿಗೆ ಅರಿವು ಮೂಡಿಸುವ ಸಂಬAಧ ಕರಪತ್ರಗಳನ್ನು ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿ ಸಿಬ್ಬಂದಿಗಳು ಬಿಡುಗಡೆಗೊಳಿಸಿದರು.

ಈ ಸಂಬAಧ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಸಾಗುವ ವಾಹನಕ್ಕೆ ಚಾಲನೆ ನೀಡಲಾಯಿತು.

ಅಡುಗೆ ಮನೆ ಕಸ, ತೋಟದ ಕಸ, ಪ್ಲಾಸ್ಟಿಕ್, ಕಾಗದ, ಲೋಹ ಮತ್ತಿತರ ವಸ್ತುಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸುವ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲಾಗುವುದು ಎಂದು ಪ.ಪಂ. ಆರೋಗ್ಯಾಧಿಕಾರಿ ಉದಯಕುಮಾರ್ ತಿಳಿಸಿದರು.

ಪ್ರತಿ ಭಾನುವಾರ ಮತ್ತು ಗುರುವಾರ ಒಣಕಸ ಮಾತ್ರ ಸಂಗ್ರಹಿಸ ಲಾಗುವುದು, ಉಳಿದ ದಿನಗಳಲ್ಲಿ ಹಸಿ ಕಸವನ್ನು ಮಾತ್ರ ಪಟ್ಟಣ ಪಂಚಾಯಿತಿ ವಾಹನಗಳಿಗೆ ನೀಡುವುದು. ಬೇರ್ಪಡಿಸದೆ ನೀಡುವ ಕಸವನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿರುವ ಉದಯ ಕುಮಾರ್, ನಿಯಮ ಪಾಲಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.