ಮಡಿಕೇರಿ, ನ. ೩: ಭಾಗಮಂಡಲದ ವಿಶ್ವ ಹಿಂದೂ ಪರಿಷದ್ ವತಿಯಿಂದ ತಾ. ೮ ರಂದು ಸಂಜೆ ೫ ಗಂಟೆ ಬಳಿಕ ವಿವಿಧ ಕಾರ್ಯಕ್ರಮಗಳೊಂದಿಗೆ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್‌ನ ತಾಲೂಕು ಮಠ ಮಂದಿರ ಪ್ರಮುಖ್ ಡಾ. ಮಹಾಭಲೇಶ್ವರ ಭಟ್ ಈ ಬಗ್ಗೆ ಮಾಹಿತಿ ನೀಡಿದರು.

ಉತ್ತರ ಭಾರತದಲ್ಲಿ ಗಂಗಾಮಾತೆಗೆ ಪ್ರತಿನಿತ್ಯವೂ ಸಂಜೆ ಸೂರ್ಯಸ್ಥಮಾನದಲ್ಲಿ ಹರಿದ್ವಾರ, ರಿಶಿಕೇಶ, ಕಾಶಿಯಲ್ಲಿ ಆರತಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ದಕ್ಷಿಣ ಭಾರತದ ಕಾವೇರಿ ಮಾತೆಗೂ ಅಷ್ಟೇ ಪಾವಿತ್ರö್ಯತೆ ಇರುವುದರಿಂದ ಭಾಗಮಂಡಲದ ವಿಶ್ವ ಹಿಂದೂ ಪರಿಷದ್ ವತಿಯಿಂದ ತಾ. ೮ ರಂದು ಸಂಜೆ ೫ ರಿಂದ ಶುಭ ಕೃತು ನಾಮ ಸಂವತ್ಸರದ ಕಾರ್ತಿಕ ಮಾಸದ ಹುಣ್ಣಿಮೆಯ ಶುಕ್ಲ ಪಕ್ಷದ ಪೂರ್ಣಿಮೆಯ ಅಂಗವಾಗಿ ಭಾಗಮಂಡಲದ ಕಾವೇರಿ ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ವೇದಘೋಷ ಭಜನೆ ಹಾಗೂ ಅರ್ಚನೆಯೊಂದಿಗೆ ಕಾವೇರಿ ಮಾತೆಗೆ ಆರತಿಯನ್ನು ಬೆಳಗಲಾಗುತ್ತದೆ. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿ.ಹಿಂ.ಪ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ತಾ. ೬ ರಿಂದ ೨೦ರ ವರೆಗೆ ವಿಶ್ವದಾದ್ಯಂತ ವಿ.ಹಿಂ.ಪ. ವತಿಯಿಂದ ಹಿತಚಿಂತಕ ಅಭಿಯಾನ ನಡೆಯಲಿದ್ದು, ಕೊಡಗಿನ ತಾಲೂಕು ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲೂ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ತಾ. ೧೩ ರಂದು ಮಹಾ ಅಭಿಯಾನ ನಡೆಯಲಿದೆ. ಅಂದು ಪೂರ್ತಿ ದಿನ ಕಾರ್ಯಕರ್ತರು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಸ್. ಸುರೇಶ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಕಾರ್ಯಕ್ರಮದ ಸಂಯೋಜಕ ಆರ್. ಮುನಿಕೃಷ್ಣ ಉಪಸ್ಥಿತರಿದ್ದರು.