*ಗೋಣಿಕೊಪ್ಪ, ನ. ೩: ಬೊಟ್ಟಿಯತ್ ನಾಡ್ "ದೇವಮಕ್ಕಡ ಬಾಣೆ ಕೋಲ್ ಮಂದ್"ಗೆ ಸೇರಿದ ಜಾಗದಲ್ಲಿ ಅರ್ವತೋಕ್ಲು ಗ್ರಾಮ ಪಂಚಾಯಿತಿ ಜಲಜೀವನ್ ಯೋಜನೆಯಡಿ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿರುವ ಹಿನ್ನೆಲೆ ಮಂದ್ ತಕ್ಕ ಮುಖ್ಯಸ್ಥರು, ನಾಡಿನವರು ವಿರೋಧ ವ್ಯಕ್ತಪಡಿಸಿದಾರೆ.

ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಗೇರಿ ಗ್ರಾಮದಲ್ಲಿರುವ ಬೊಟ್ಟಿಯತ್ ನಾಡಿಗೆ ಸೇರಿದ "ದೇವಮಕ್ಕಡ ಬಾಣೆ ಕೋಲ್ ಮಂದ್'ನಲ್ಲಿ" ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ, ‘ಕೋಲ್ ಮಂದ್'ನ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರ ಅನುಮತಿ ಪಡೆಯದೆ ಸುರಕ್ಷಿತವಾಗಿ ಕಾಯ್ದಿರಿಸಲಾದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ "ದೇವಮಕ್ಕಡ ಬಾಣೆ ಕೋಲ್ ಮಂದ್"ನಲ್ಲಿ ಬೊಟ್ಟಿಯತ್ ನಾಡಿನ ಆರು ಊರುಗಳಿಗೆ ಸೇರಿದ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ತುರ್ತು ಸಭೆ ನಡೆಸಿ ಯಾವುದೇ ಕಾರಣಕ್ಕೂ ಪವಿತ್ರ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರುಗಳು ಇಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿಯೇ ತೀರುತ್ತೇವೆ ಎಂದು ಸವಾಲು ಎಸೆದಾಗ ತಕ್ಕ ಮುಖ್ಯಸ್ಥರುಗಳ ಮತ್ತು ಗ್ರಾ.ಪಂ. ಸದಸ್ಯರುಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಈ ಸಂದರ್ಭ ಮಾತನಾಡಿದ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಸಿ. ಕುಶಾಲಪ್ಪ, ಅನಾದಿ ಕಾಲದಿಂದಲೂ ಈ ಜಾಗವನ್ನು ಸಂರಕ್ಷಿಸಿಕೊAಡು ಬರಲಾಗಿದೆ. ಇದರ ಬಹಳಷ್ಟು ಜಾಗ ಒತ್ತುವರಿಯಾಗಿದೆ. ಇದೀಗ ಉಳಿದಷ್ಟು ಜಾಗಕ್ಕೆ ಬೇಲಿ ಹಾಕಿ ನಮ್ಮ ಮುಂದಿನ ಪೀಳಿಗೆಗೆ ಈ ಕೋಲ್ ಮಂದ್ ಸಂರಕ್ಷಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಮಂದ್ ಒಳಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.

ಕುಂದಾ ಮುಗುಟಿಗೇರಿ ತಕ್ಕಮುಖ್ಯಸ್ಥ ಕುಟುಂಬಸ್ಥರ ಪರವಾಗಿ ಕೊಡಂದೇರ ಬಾಂಡ್ ಗಣಪತಿ ನೀರಿನ ಟ್ಯಾಂಕ್ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದರು.

ತೀತಮಾಡ ಎಂ ಉತ್ತಪ್ಪ, ಅಚ್ಚಿಯಂಡ ಬೋಸು, ಕೊಡಂದೇರ ಎಂ ಸುಬ್ಬಯ್ಯ, ಮನೆಯಪಂಡ ಅನಿಲ್, ಚಮ್ಮಟೀರ ಸುಗುಣ ಮುತ್ತಣ್ಣ, ಕಾಡ್ಯಮಾಡ ಪೂಣಚ್ಚ, ಸಣ್ಣುವಂಡ ಪೂಣಚ್ಚ, ಚಮ್ಮಟೀರ ಪ್ರವೀಣ್ ಉತ್ತಪ್ಪ, ತೀತಮಾಡ ಎಸ್. ಗಣಪತಿ, ಕಾಡ್ಯಮಾಡ ನವೀನ್, ಕೊಡಂದೇರ ಪವನ್, ಮೂಕಳೇರ ಬಿ. ರಮೇಶ್, ಗುಮ್ಮಟೀರ ದರ್ಶನ್ ನಂಜಪ್ಪ, ಗುಮ್ಮಟೀರ ಚೆಂಗಪ್ಪ, ಗುಮ್ಮಟೀರ ಕೌಶಿಕ್, ಕೆ.ಟಿ. ಕರುಂಬಯ್ಯ, ಡಿ.ಬಿ. ಪೂಣಚ್ಚ, ಎಂ.ಪಿ. ವಿನು, ಎಸ್.ವಿ. ರಾಜ ಇದ್ದರು.