ಮಡಿಕೇರಿ, ನ. ೨: ಕೊಡಗಿನಲ್ಲಿರುವ ಬಂಟ, ಬಿಲ್ಲವ, ಮೊಗೇರ ಆದಿ ದ್ರಾವಿಡ, ಕುಲಾಲ, ಪರಿವಾರ ಬಂಟ, ವಿಶ್ವಕರ್ಮ, ಮರಾಠ ಮರಾಠಿ (ನಾಯ್ಕ್), ತುಳುವ ಬ್ರಾಹ್ಮಣ, ಪದಾರ್ಥಿ, ಗಾನಿಗ ಸಮುದಾಯದವರಿಗೆ ಡಿಸೆಂಬರ್ ೨೩, ೨೪ ಹಾಗೂ ೨೫ ರಂದು ತುಳುವೆರ ಕ್ರಿಕೆಟ್ ಪ್ರೀಮಿಯರ್ ಲೀಗ್ - ೨೦೨೨ ಏರ್ಪಡಿಸಲಾಗಿದೆ ಎಂದು ಕೊಡಗು ತುಳುವೆರ ಯುವ ಸಮಿತಿ ತಿಳಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಸಮಿತಿಯ ಪದಾಧಿಕಾರಿಗಳು, ಐ.ಪಿ.ಎಲ್ ಮಾದರಿಯಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ೧೨ ಫ್ರಾಂಚೈಸ್ಗಳನ್ನು ಒಳಗೊಂಡ ಒಟ್ಟು ೨೦೦ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಲಾಗುತ್ತದೆ. ಪ್ರಥಮ ಬಹುಮಾನಿತ ತಂಡಕ್ಕೆ ರೂ.೧ ಲಕ್ಷ ೨೨ ಸಾವಿರದ ೩೩೩, ದ್ವಿತೀಯ ಬಹುಮಾನಿತ ತಂಡಕ್ಕೆ ರೂ.೬೬,೭೭೭ ಹಾಗೂ ಟ್ರೋಫಿಗಳು ಹಾಗೂ ತೃತೀಯ ಬಹುಮಾನಿತ ತಂಡಕ್ಕೆ ಟ್ರೋಫಿ ನೀಡಲಾಗುವುದಾಗಿ ಸಮಿತಿಯ ಸದಸ್ಯ ವಿವೇಕ್ ಮೊಗೇರ ಅವರು ಮಾಹಿತಿ ನೀಡಿದರು. ಪಂದ್ಯ ಪುರುಷೋತ್ತಮ ಆಟಗಾರನಿಗೆ ಬೈಸಿಕಲ್, ಬೆಸ್ಟ್ ಬೌಲರ್ಗೆ ಸ್ಪೋರ್ಟ್ಸ್ ಶೂಸ್, ಉತ್ತಮ ದಾಂಡಿಗನಿಗೆ ಸ್ಮಾರ್ಟ್ ವಾಚ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಿಗೆ ಕ್ರಿಕೆಟ್ ಬ್ಯಾಟ್, ಉದಯೋನ್ಮುಖ ಆಟಗಾರನಿಗೆ ಸ್ಮಾರ್ಟ್ ಫೋನ್ ಬಹುಮಾನ ನೀಡಲಾಗುವುದಾಗಿ ಅವರು ಮಾಹಿತಿ ನೀಡಿದರು.
ಕ್ರಿಕೆಟ್ನೊಂದಿಗೆ ಪುರುಷರಿಗೆ ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಕೂಡ ಆಯೋಜಿಸಲಾಗಿದೆ ಎಂದ ಅವರು ಡಿಸೆಂಬರ್ ೨೩ ರಂದು ಕ್ರೀಡಾಕೂಟದ ಉದ್ಘಾಟನೆಯು ನಗರದ ಗಾಂಧಿ ಮೈದಾನದಿಂದ ತುಳುನಾಡಿನ ವೇಷಭೂಷಣ, ನೃತ್ಯ, ವಾದ್ಯದೊಂದಿಗೆ ಜನರಲ್ ತಿಮ್ಮಯ್ಯ ಕ್ರೀಡಾಂಗಣ ದವರೆಗೆ ಮೆರವಣಿಗೆ ಮೂಲಕ ನಡೆಯಲಿದೆ. ತುಳುನಾಡಿನ ಪ್ರತಿಷ್ಠಿತ ನಟ ಹಾಗೂ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ದೀಪಕ್ ರೈ, ಸದಸ್ಯರಾದ ವಿವೇಕ್ ಮೊಗೇರ, ರೇಣುಕಾ ಪ್ರಸಾದ್ ಶೆಟ್ಟಿ, ಕೇಶವ ಶೆಟ್ಟಿ, ದಿವ್ಯಾ ಪೂಜಾರಿ ಹಾಗೂ ಕೀರ್ತನಾ ರೈ ಅವರುಗಳು ಇದ್ದರು. ಹೆಚ್ಚಿನ ಮಾಹಿತಿಗಾಗಿ ದೀಪಕ್ ರೈ, ಮೊ. ೯೯೦೦೧೦೨೬೪೬ ಅವರನ್ನು ಸಂಪರ್ಕಿಸಬಹುದು.