ಕಣಿವೆ, ನ. ೨: ನಿಮಗೆ ನಿಮ್ಮ ತಾಯಿ ಎರಡು ವರ್ಷ ಕುಡಿಸುವ ಎದೆ ಹಾಲಿನ ನಂತರ ನಿಮ್ಮ ಜೀವಿತದ ಅವಧಿ ಪೂರ್ಣ ನಾವು ಕೊಡುವ ಹಾಲನ್ನು ಕುಡಿವ ಹೇ ಮನುಜರೇ... ನಿಮ್ಮದಲ್ಲದ ನಮ್ಮ ಗೋಮಾಳ ಎಂಬ ಜಾಗವನ್ನು ಅತಿಕ್ರಮಿಸಿ ಆಕ್ರಮಿಸಿ ಆಧುನಿಕವಾದ ಸವಲತ್ತುಗಳನ್ನು ಹೊಂದಿಕೊAಡ ನೀವು ಇದೀಗ ನಮಗೆ ಮೇಯಲು ಯಾವುದೇ ಜಾಗವೇ ಇಲ್ಲದಂತೆ ಮಾಡಿದ್ದೀರಾ... ಹಾಗಿದ್ದರೂ ಕೂಡ ನಮ್ಮನ್ನೇಕೆ ದೂರುತ್ತೀರಾ...
ಹಿಂದೆ ನಿಮ್ಮ ಅಜ್ಜನ ಕಾಲದಲ್ಲಿ ನಮ್ಮ ಸಂತತಿ ಹೆಚ್ಚಾಗಿದ್ದಾಗ ನಮ್ಮಿಂದ ಉತ್ಪಾದನೆಯಾಗುತ್ತಿದ್ದ ಸಗಣಿ - ಗಂಜಲ ಸಮ್ಮಿಶ್ರಣದ ಸಾವಯವ ಗೊಬ್ಬರವನ್ನು ನಿಮ್ಮ ಹೊಲ ಗದ್ದೆಗಳಿಗೆ ಹಾಕಿ ಬೆಳೆದು ತಿನ್ನುತ್ತಿದ್ದ ಆಹಾರ ನಿಮಗೆ ಹೆಚ್ಚು ಹೆಚ್ಚು ಆರೋಗ್ಯ ಕೊಡುತ್ತಿತ್ತು. ಹಾಗಾಗಿ ಯಾವುದೇ ಕಾಯಿಲೆ ಕಸಾಲೆಗಳಿಲ್ಲದೇ ದೀರ್ಘಾ ಯುಷಿಗಳಾಗಿ ಬದುಕಿದ್ದರು.
ಆದರೆ ಆಧುನಿಕತೆ ಧಾಂಗುಡಿ ಇಟ್ಟಂತೆಯೇ ನಮ್ಮ ಸಂತತಿಯನ್ನು ರಕ್ಷಿಸದ ನಿಮ್ಮ ಹೇಯತನದಿಂದಾಗಿ ಇಂದು ನೀವುಗಳು ರೋಗ ರುಜಿನಗಳಿಗೆ ಹೆದರಿ ಮನೆಯೊಳಗೆ ಸೇರುತ್ತಿರುವುದನ್ನು ಮರೆಯಬೇಡಿ.
ಹಿಂದೆ ಆಧುನಿಕತೆ ಸ್ಪರ್ಶ ವಿಲ್ಲದೇ ಇದ್ದಾಗ ಹಳ್ಳಿಗಳಲ್ಲಿನ ಪ್ರತಿಯೊಬ್ಬರ ಮನೆಗಳಲ್ಲಿ ಮನೆಗಳ ಪ್ರವೇಶದಲ್ಲಿಯೇ ನಮಗೆಂದೇ ನಿರ್ಮಿಸಿದ್ದ ಕೊಟ್ಟಿಗೆಗಳಿದ್ದವು.
ಹಾಗೆಯೇ ಮನೆ ಬಗ್ಗುಲಿನ ಹಿತ್ತಲಿನಲ್ಲಿ ಮಾರುದ್ದಗಳ ಹುಲ್ಲು ಹಾಸಿನ ಗುಡ್ಡೆಗಳು ಇರುತ್ತಿದ್ದವು. ಹಾಗೆಯೇ ಆಯಾಯ ಊರಿನ ಹೆಬ್ಬಾಗಿಲಿನಲ್ಲಿ ಪೂರ್ವಜರು ನಮಗೆಂದೇ ತೋಡಿದ್ದ ಕೆರೆ - ಕಟ್ಟೆಗಳಲ್ಲಿ ನೀರು ತುಂಬಿರುತ್ತಿತ್ತು. ಹಾಗಾಗಿ ನಾವು ನಮ್ಮನೆ ಅಂಗಳದಲ್ಲೇ ಇರುತ್ತಿದ್ದ ಹುಲ್ಲು ಸೊಪ್ಪು ಸೆದೆಗಳನ್ನು ತಿಂದು ಸೊಂಪಾದ ನೀರು ಕುಡಿದು ನಿಶ್ಚಿಂತೆಯಿAದ ಇರುತ್ತಿದ್ದೆವು. ಹಾಗಾಗಿ ನಾವು ಅಂದು ಜನಜಂಗುಳಿಯ ಯಾವ ರಸ್ತೆಗಳಲ್ಲಾಗಲೀ ಜನವಸತಿಯ ಬೀದಿಗಳಲ್ಲಾಗಲೀ ಬೀಡಾಡಿಗಳಾಗಿ ಸುತ್ತಿದ್ದೇ ಇಲ್ಲ.
ಆದರೆ ಇಂದು ನಮ್ಮ ಪರಿಸ್ಥಿತಿ ಏನಾಗಿದೆ...? ನಮ್ಮ ಸಂತತಿಯನ್ನು ಎಲ್ಲಿಗೆ ತಂದು ಇರಿಸಿದ್ದೀರಾ ನೀವೇ ಯೋಚಿಸಿ ಮನುಜರೇ...? ನಮಗಿಂದು ಎಲ್ಲಿಯೂ ಹುಲ್ಲು ಮೇಯಿಸಲು ಗೋಮಾಳಗಳೇ ಇಲ್ಲದ ಹಾಗೆ ಮಾಡಿದ್ದೀರಾ.
ಊರ ಬಾಗಿಲಿನ ಶಾಲಾ - ಕಾಲೇಜು, ಆಸ್ಪತ್ರೆ ಮೊದಲಾದ ಸರ್ಕಾರಿ ಜಾಗಗಳ ಆವರಣದಲ್ಲಿ ಬೆಳೆಯುತ್ತಿದ್ದ ಹುಲ್ಲು ಸೊಪ್ಪು ತಿಂದು ಅಲ್ಲೇ ಕಣ್ಣಳತೆಯಲ್ಲಿಯೇ ಸಿಗುತ್ತಿದ್ದ ಕೆರೆ ಕಟ್ಟೆಗಳ ನೀರು ಕುಡಿದು ಹಾಯಾಗಿ ಇರುತ್ತಿದ್ದೆವೆಲ್ಲಾ...
ಅಂದು ನಮ್ಮ ಆಹಾರದ ಮೂಲ ಸ್ಥಾನಗಳಿಗೆಲ್ಲಾ ನಾವು ಬಾರದಂತೆ ತಡೆ ಗೋಡೆ ಕಟ್ಟಿಕೊಂಡಿದ್ದೀರಾ. ನಾವು ಮಿಸ್ ಆಗಿ ಮರೆತೂ ಕಾಲಿಡದಂತೆ ತಂತಿ ಬೇಲಿಗಳನ್ನು ಹಾಕಿಕೊಂಡಿದ್ದೀರಾ. ಅಂದು ನಮ್ಮದೇ ಆಗಿದ್ದ ನಮಗೆಯೇ ಸೇರಿದ್ದ ಕೆರೆ ಕಟ್ಟೆಗಳ ಜಾಗಕ್ಕೂ ಕನ್ನ ಹಾಕಿ ಎಲ್ಲವನ್ನೂ ಮಟ್ಟಸಮಯ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದೀರಾ.
ಹಾಗಿರುವಾಗ ನಿಮಗಿಂತ ದೊಡ್ಡ ಹೊಟ್ಟೆಯವರಾದ ನಾವು ನಮ್ಮ ಹಸಿವು ನೀಗಿಸಿಕೊಳ್ಳಲು ಹೋಗುವುದಾದರೂ ಎಲ್ಲಿಗೆ ? ನೀವೇ ಹೇಳಿ.
ಏನೋ ನಮ್ಮ ಸಂತತಿಯವರು ಹಾಗು ನಮ್ಮ ಕುಟುಂಬಸ್ಥರೊAದಿಗೆ ಅಂದು ಹಳ್ಳಿಯಾಗಿದ್ದ ಇಂದಿನ ಆಧುನಿಕ ನಗರ ಪಟ್ಟಣಗಳ ರಸ್ತೆಗಳಿಗೆ ಬಂದರೆ ನಮ್ಮನ್ನು ಹಿಡಿದಟ್ಟಿ...ದೊಡ್ಡಿಗೆ ಹೊಡೀರಿ...ಎಂದೆಲ್ಲಾ ಬೊಬ್ಬೆ ಹಾಕ್ತಾ ಇದ್ದೀರಲ್ಲಾ...ನಿಮ್ಮ ಬುದ್ದಿಗೆ ನಾವು ಏನು ಹೇಳಬೇಕು...?
ನೀವು ಕೊಡ್ತಾ ಇರೋ ಸಂಕಷ್ಟಕ್ಕೆ ನಾವೇನಾದರೂ ನಿಮ್ಮಗಳ ರೀತಿಯ ಅಮಾನವೀಯ ವರ್ತನೆ ತೋರಿ ಹಾಲು ಹಿಂಡುವುದನ್ನೇ ನಿಲ್ಲಿಸಿದರೆ ನೀವು ಯಾರ ಹಾಲು ಕುಡಿಯುತ್ತೀರಾ..?
ನಿಮಗೇನಾದರೂ ನಿಮ್ಮ ಮನೆಗಳಿಗೇನಾದರೂ ಸೂತಕ ಬಾಧಿಸಿದರೆ ಆ ದೋಷಗಳ ನಿವಾರಣೆಗೆ ನಮ್ಮ ಮಲ ಮೂತ್ರವೇ ಬೇಕೆಂದು ಅರಸಿ ಬರುತ್ತೀರಲ್ಲವೇ....?
ನೀವು ಹೊಸದಾಗಿ ಕಟ್ಟುವ ವಾಸದ ಮನೆಗಳಲ್ಲಿ ಮೊದಲು ಮಾಡುವ ಅಡುಗೆಗು ಮುನ್ನಾ ನಾವು ಕೊಡುವ ಹಾಲು ಕಾಯಿಸಿ ಉಕ್ಕಿಸುತ್ತೀರಲ್ಲಾ...
ನಿಮ್ಮನೆಯೊಳಗೆ ನೆರವೇರಿಸುವ ಧಾರ್ಮಿಕ ಕಟ್ಟಳೆಗಳಲ್ಲಿ ಮಾಡುವ ಗರಿಕೆ ಗಣಪತಿ ಪೂಜೆಗೆ ನಮ್ಮ ಸಗಣಿಯೇ ಬೇಕಲ್ಲಾ ನಿಮಗೆ...!
ನೀವು ಕಟ್ಟಿ ವಾಸಕ್ಕೆ ಹೋಗುವ ಹೊಸ ಮನೆಗಳ ಗೃಹ ಪ್ರವೇಶಕ್ಕೆ ನಾವೇ ಬೇಕಲ್ಲಾ ನಿಮಗೆ... ಏನು ಹೇಳಲಿ ಮನುಜರೇ ನಿಮ್ಮ ಸ್ವಾರ್ಥ ಬುದ್ದಿಗೆ.
ಇನ್ನಾದರೂ ಬದಲಾಗಿ. ನಿಮ್ಮಿಷ್ಟಾರ್ಥ ನೆರವೇರಿಸುವ ನಮಗೆ ಮೇಯಲು ಪ್ರತಿ ಗ್ರಾಮಗಳಲ್ಲಿ ಒಂದು ಸೂಕ್ತ ಸ್ಥಳವನ್ನು ನೀವೇ ಸಿದ್ಧಗೊಳಿಸಿ. ಅದರೊಳಗೊಂದು ಕುಡಿವ ನೀರಿನ ಗುಂಡಿಯನ್ನು ಅಳವಡಿಸಿ. ಹಾಗಿದ್ದಾಗ ನಾವೇಕೆ ನಿಮ್ಮ ರಸ್ತೆಗೆ ಬರ್ತೇವೆ...!
ನಿಮಗೇಕೆ ಅಡ್ಡಿಪಡಿಸ್ತೇವೆ...? ನಮ್ಮ ಮನದೊಡಲ ಅಳಲು ನೀವೇ ಅರ್ಥ ಮಾಡಿಕೊಳ್ಳಿ. ಬೀಡಾಡಿ ದನಗಳು ಎಂದು ಹೀಗಳೆಯಬೇಡಿ. ನಮಗೂ ಕುಟುಂಬ ಇದೆ. ಸಂತತಿ ಇದೆ.
ನಮಗೂ ಹಿಂದೂ ಧಾರ್ಮಿಕ ಪದ್ದತಿಯಲ್ಲಿ ಪೂರ್ವಜರು ನೀಡಿದ ಒಂದು ಸ್ಥಾನಮಾನ - ಗೌರವ ಅಂತಾ ಇದೆ. ಅದನ್ನು ಆಧುನಿಕ ಮಾನವರಾದ ನೀವು ಕಡೆಗಣಿಸಿ ಕಷ್ಟ ಕಾರ್ಪಣ್ಯಗಳಿಗೆ ಗುರಿಯಾಗಬೇಡಿ.
ನೀವು ನಿಮ್ಮನೆಯಂಗಳದಲ್ಲಿ ನೀವು ಸಾಕುವ ಶ್ವಾನಕ್ಕೆ ಅಂದ ಚೆಂದದ ಗೂಡು ಕಟ್ಟುತ್ತೀರಾ. ಅವುಗಳ ಹಸಿವು ನೀಗಿಸಲು ಅಂಗಡಿಗಳಿAದ ದುಪ್ಪಟ್ಟು ಹಣ ಕೊಟ್ಟು ಆಹಾರ ತಂದು ಹಾಕುತ್ತೀರಾ..
ಆದರೆ ನಿಮ್ಮ ಹಾಗೂ ನಿಮ್ಮ ಪುಟಾಣಿ ಮಕ್ಕಳ ಆರೋಗ್ಯ ಸಂಜೀವಿನಿಯಾದ ಪರಿಶುದ್ಧವಾದ ಹಾಲನ್ನು ಜೀವಮಾನವಿಡೀ ಕೊಡುವ ನಮ್ಮನ್ನು ಎಲ್ಲಿ ಇಟ್ಟಿದ್ದೀರಾ...ಎಲ್ಲಿ ಕಟ್ಟುತ್ತೀರಾ... ಒಮ್ಮೆ ಕುಳಿತು ಯೋಚಿಸಿ. ಆಲೋಚಿಸಿ.
ನೀವು ಈಗ ಮಾಡುತ್ತಿರು ವುದೇನು...? ಮಾಡಬೇಕಿರುವುದು ಏನು ? ನೀವೇ ನಿರ್ಧರಿಸಿ.
ಇಂತಿ ನಿಮಗೆ ನಿತ್ಯವೂ ಹಾಲು ಕೊಡುವ ನೊಂದ ಗೋವುಗಳು...
- ಕೆ.ಎಸ್. ಮೂರ್ತಿ, ಕುಶಾಲನಗರ