ಸೋಮವಾರಪೇಟೆ, ಅ. ೩೧: ಬೆಂಗಳೂರಿನಲ್ಲಿ ನಿರ್ಮಾಣ ಗೊಂಡಿರುವ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಉದ್ಯಾನವನ ನಿರ್ಮಾಣಕ್ಕೆ ಪ್ರತಿ ಊರಿನಿಂದ ಮಣ್ಣುಸಂಗ್ರಹಿಸುವ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಪ್ರಗತಿಯ ಪ್ರತಿಮೆ ರಥವು ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಭವ್ಯ ಸ್ವಾಗತ ಕೋರಲಾಯಿತು.

ಇಲ್ಲಿನ ವಿವೇಕಾನಂದ ವೃತ್ತದ ಬಳಿ ರಥಕ್ಕೆ ಪುಷ್ಪಗುಚ್ಛ ಅರ್ಪಿಸಿ, ಈಡುಗಾಯಿ ಒಡೆದು ಬರಮಾಡಿಕೊಳ್ಳಲಾಯಿತು. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೇರಿದಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ರಥವನ್ನು ಸ್ವಾಗತಿಸಿ, ಪಟ್ಟಣದ ಪ್ರಮುಖ ಮಾರ್ಗದಲ್ಲಿ ಬ್ಯಾಂಡ್‌ಸೆಟ್‌ನೊAದಿಗೆ ತೆರಳಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿದ ನಂತರ ಜೇಸೀ ವೇದಿಕೆಯಲ್ಲಿ ರಥಕ್ಕೆ ಮೃತ್ತಿಕೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಮತ್ತು ಮುಂದಿನ ಪೀಳಿಗೆಗೆ ಆದರ್ಶಗಳನ್ನು ತಲುಪಿಸುವ ಅಂಗವಾಗಿ ರಾಜ್ಯ ಸರ್ಕಾರ ೧೫೦ ಕೋಟಿ ಅನುದಾನದಲ್ಲಿ ಭವ್ಯ ಪ್ರತಿಮೆ ನಿರ್ಮಿಸಿದೆ ಎಂದರು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ದಕ್ಷಿಣ ಕನ್ನಡ ಉಸ್ತುವಾರಿ ಬಿ.ಬಿ. ಭಾರತೀಶ್ ಅವರುಗಳು ಮಾತನಾಡಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ನಾಚಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಮಾಜೀ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ನಗರ ಗೌಡ ಸಮಾಜದ ಅಧ್ಯಕ್ಷ ಪ್ರಕಾಶ್‌ಕುಮಾರ್, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಮಹಿಳಾ ಮೋರ್ಚಾದ ರೂಪಾ ಸತೀಶ್, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಎಸ್.ಸಿ. ಘಟಕದ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ, ಪ.ಪಂ. ಸದಸ್ಯರುಗಳು, ಪ್ರಗತಿಪರ ಮಹಿಳಾ ವೇದಿಕೆಯ ಕವಿತಾ ವಿರೂಪಾಕ್ಷ, ಆಶಾ ಯೋಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.