ವೀರಾಜಪೇಟೆ, ಅ. ೩೧: ವೀರಾಜಪೇಟೆ ಪುರಸಭೆ ಸ್ಥಾಯಿ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು ಬಿಜೆಪಿಯ ೫ ಕಾಂಗ್ರೆಸ್‌ನ ೩ ಸದಸ್ಯರು ಸೇರಿ ಒಟ್ಟು ಎಂಟು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಸಂಸದ ಪ್ರತಾಪ್ ಸಿಂಹ, ಪುರಸಭೆ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ ಧ್ವನಿಮತದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಆರಂಭದಲ್ಲಿ ಕಾಂಗ್ರೆಸ್‌ನ ರಾಜೇಶ್ ಮಾತನಾಡಿ ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ೧೧ ಸದಸ್ಯರನ್ನು ಆಯ್ಕೆ ಮಾಡಿ ಎಂದಾಗ ಅಧ್ಯಕ್ಷರು ಕೇವಲ ಆರು ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು. ಕಾಂಗ್ರೆಸ್ ಸದಸ್ಯ ಮಹಮದ್ ರಾಫೀ ಮಾತನಾಡಿ ಹಿಂದೆ ೧೧ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಆಡಳಿತ ಪಕ್ಷದ ನೀವು ಗಳು ೬ ಸದಸ್ಯರನ್ನು ಇಟ್ಟುಕೊಂಡು ವಿರೋಧ ಪಕ್ಷದ ೫ ಸದಸ್ಯರನ್ನು ಆಯ್ಕೆ ಮಾಡಿ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಒಪ್ಪದ ಅಧ್ಯಕ್ಷರು. ಕೇವಲ ಆರು ಸದಸ್ಯರ ಸಮಿತಿ ರಚನೆ ಮಾಡುವುದಾಗಿ ಘೋಷಿಸಿದಾಗ ಚುನಾವಣೆ ಪ್ರಕ್ರಿಯೆ ನಡೆಯಲಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

ಬಿಜೆಪಿಯಿಂದ ಸುನಿತಾ ಜೂನಾ, ಆಶಾ ಸುಬ್ಬಯ್ಯ, ಅನಿತಾ, ಯಶೋಧ, ಜಲೀಲ್, ಸುಭಾಷ್ ಮಹಾದೇವ, ಕಾಂಗ್ರೆಸ್‌ನಿAದ ದೇಚಮ್ಮ ಕಾಳಪ್ಪ, ರಂಜಿ ಪೂಣಚ್ಚ, ಮತೀನ್, ರಜನಿಕಾಂತ್, ಅಗಸ್ಟೀನ್ ಬೆನ್ನಿ ಕೈ ಎತ್ತುವುದರ ಮೂಲಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅನಿವಾರ್ಯ. ಗೆಲ್ಲುವವರೆಗೆ ಮಾತ್ರ ಪಕ್ಷಗಳು; ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಹೋಗಬೇಕು. ಪಕ್ಷಭೇದ ಮರೆತು ನಿಮ್ಮ ಎಲ್ಲಾ ವಾರ್ಡ್ಗಳಿಗೆ ಅನುದಾನ ನೀಡಿದ್ದೇನೆ ೫-೩ ಅನುಪಾತದಲ್ಲಿ ಸ್ಥಾಯಿ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಸುವ ಎಂದು ಸದಸ್ಯರನ್ನು ಮನವಿ ಮಾಡಿಕೊಂಡರು.

ಶಾಸಕರ ಮನವಿಯ ಮೇರೆಗೆ ಬಿಜೆಪಿಯ ಮಹಾದೇವ್, ಕಾಂಗ್ರೆಸ್‌ನ ದೇಚಮ್ಮ ಕಾಳಪ್ಪ, ಮತೀನ್ ಅವರುಗಳು ಸ್ಥಾಯಿ ಸಮಿತಿಯಲ್ಲಿ ಸದಸ್ಯತ್ವ ಬೇಡ ಎಂದು ವಾಪಾಸು ಪಡೆದುಕೊಂಡ ಹಿನ್ನೆಲೆಯಲ್ಲಿ ೮ ಜನ ಸದಸ್ಯರು ಅವಿರೋಧವಾಗಿ ಆಯ್ಕೆ ಆದರು.

ಚುನಾವಣಾ ಪಕ್ರಿಯೆ ಮುಗಿದ ನಂತರ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಮಳೆ ಪರಿಹಾರ ಅಡಿಯಲ್ಲಿ ಎನ್‌ಡಿಆರ್‌ಎಫ್‌ನಿಂದ ೧ ಕೀ.ಮಿಗೆ ೬೦ ಸಾವಿರ ಹಣವನ್ನು ಗುಂಡಿ ಮುಚ್ಚಲು ನೀಡಲಾಗುತ್ತದೆ. ಮಳೆ ನಿಂತ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಮುಖ್ಯಾಧಿಕಾರಿ ಚಂದ್ರಕುಮಾರ್ ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.