ಸಿದ್ದಾಪುರ, ಅ. ೩೧: ವನ್ಯಪ್ರಾಣಿ ಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸ ಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಸಂಘಟನೆಗಳ ವತಿಯಿಂದ ತಾ. ೨೧ ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಅರಣ್ಯ ಭವನದ ಎದುರು ಧರಣಿ ನಡೆಸಲು ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ರೈತರು, ಕಾರ್ಮಿಕರು, ಆದಿವಾಸಿ ಬುಡಕಟ್ಟು ಜನಾಂಗ ಒಳಗೊಂಡ ೫ ತಾಲೂಕು ವ್ಯಾಪ್ತಿಯ ಸಂಘ ಸಂಸ್ಥೆ ಮತ್ತು ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ನಡೆದ ಸಭೆ ಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ವನ್ಯಜೀವಿಗಳ ಹಾವಳಿ ಮಿತಿ ಮೀರಿದ್ದು, ಆನೆ-ಮಾನವ ಸಂಘರ್ಷ ಕೂಡ ಹೆಚ್ಚಾಗಿದೆ. ಹಲವಾರು ಮಂದಿ ವನ್ಯಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆದರೆ ಸರ್ಕಾರಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ಶಾಶ್ವತ ಯೋಜನೆಯನ್ನು ರೂಪಿಸದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ವನ್ಯಪ್ರಾಣಿಗಳ ದಾಳಿಗೆ ಸಿಲುಕಿ ಜಾನುವಾರುಗಳು ಸತ್ತರೆ ಹಾಗೂ ಬೆಳೆಹಾನಿ ಆದರೆ ಸೂಕ್ತ ಪರಿಹಾರ ವನ್ನು ನೀಡದೇ ತೊಂದರೆಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು - ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದರು.
ಸರ್ಕಾರದ ಹಾಗೂ ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷö್ಯಗಳನ್ನು ಖಂಡಿಸಿ ಹಾಗೂ ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿ ತಾ. ೨೧ ರಂದು ಬೆಳಿಗ್ಗೆ ೧೦.೩೦ಕ್ಕೆ ಮಡಿಕೇರಿ ತಿಮ್ಮಯ್ಯ ಸರ್ಕಲ್ನಿಂದ ಜಿಲ್ಲೆಯ ವಿವಿಧ ಸಂಘಟನೆಗಳ ಹಾಗೂ ಕಾರ್ಮಿಕರನ್ನು ಒಗ್ಗೂಡಿಸಿ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನು ಸೋಮಯ್ಯ ತಿಳಿಸಿದರು. ಅದೇ ದಿನ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದೆಂದರು. ಅಂದು ತೋಟ ಕಾರ್ಮಿಕರು ಕೂಡ ಒಂದು ದಿನ ಕೆಲಸಕ್ಕೆ ಗೈರುಹಾಜರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಖಾಸಗಿ ಕಾಫಿ ಸಂಸ್ಥೆಗಳು ತಿಳಿಸಿವೆ ಎಂದು ಮಾಹಿತಿಯಿತ್ತರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಸುಭಾಷ್ ಸುಬ್ಬಯ್ಯ, ಕೋಶಾಧಿಕಾರಿ ಇಟ್ಟಿರ ಸಬಿತಾ ಭೀಮಯ್ಯ, ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ, ರೈತ ಸಂಘದ ಸಿದ್ದಾಪುರ ಶಾಖೆಯ ಅಧ್ಯಕ್ಷ ದೇವಣಿರ ಬೋಪಯ್ಯ, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಸೋಮಪ್ಪ, ಎನ್.ಡಿ. ಕುಟ್ಟಪ್ಪ, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತುಳಸಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಶಾಖೆಯ ಕೋಶಾಧಿಕಾರಿ ಎಂ.ಬಿ. ಸಜೀವನ್ ಸ್ವಾಗತಿಸಿ, ಚೇನಂಡ ಪೂಣಚ್ಚ ವಂದಿಸಿದರು.
- ವಾಸು