ಮಡಿಕೇರಿ, ನ. ೧: ದೇವಾನುದೇವತೆಗಳ- ದಾರ್ಶನಿಕರ ವೇಷತೊಟ್ಟ ಪುಟಾಣಿ ಮಕ್ಕಳು., ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ಪುಟಾಣಿ ಬಾಲೆಯರಿಂದ ಹಿಡಿದು ಪುರುಷ - ಮಹಿಳೆಯರಾದಿಯಾಗಿ ವೃದ್ಧರು., ಗಜ ಗಾಂಭೀರ್ಯದಿAದ ನಡೆಯುತ್ತಿದ್ದ ‘ಮಾವೇಲಿ’ ವೇಷಧಾರಿ.., ದೋಣಿಯಲ್ಲಿ ಕಡಲ ದಾಟಿ ಬರುತ್ತಿದ್ದ ‘ಬಲಿ ಚಕ್ರವರ್ತಿ’., ನಿಂತಲ್ಲಿಯೇ ಹೆಜ್ಜೆ ಹಾಕುವಂತೆ ಮಾಡುತ್ತಿದ್ದ ಚಂಡೆ ಸದ್ದು.., ಇವರೆಲ್ಲರನ್ನೂ ಮುನ್ನಡೆಸುತ್ತಿದ್ದ ಆಕರ್ಷಕ ಕನ್ನಡಮ್ಮನ ರಥ.., ಮುಂದೆ ಸಾಗಿದಂತೆ ಅತ್ತ ಕಣ್ಣು ಕೋರೈಸುವ ಬಣ್ಣ- ಬಣ್ಣದ ಹೂವಿನ ರಂಗೋಲಿ(ಪೂಕಳA)., ಬಾಯಲ್ಲಿ ನೀರೂರಿಸಿದ ಬಗೆ ಬಗೆಯ ತಿನಿಸುಗಳು (ಓಣಂ ಸಧ್ಯ)., ಸಾಂಪ್ರದಾಯಿಕ ನೃತ್ಯ ಕಲೆಗಳ ಸೌರಭದ ನಡುವೆ ನೆರೆದಿದ್ದವರ ಸಂಭ್ರಮ ಮಂಜಿನ ನಗರಿ ಮಡಿಕೇರಿಯಲ್ಲಿ ಮೇಳೈಸಿತು...

ಮಡಿಕೇರಿ ತಾಲೂಕು ಹಿಂದೂ ಮಲಯಾಳಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಓಣಾಘೋಷಂ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ವಿಜೃಂಭಣೆಯಿAದ ಜರುಗಿತು. ನಗರದ ಕಾವೇರಿ ಹಾಲ್ ಬಳಿ ಮದೆನಾಡುವಿನ ಬೆಳೆಗಾರ ಪ್ರಕಾಶ್ ರಾಷ್ಟç ಧ್ವಜಾರೋಹಣ ಮಾಡಿದರು. ಓಣಂ ಸಧ್ಯ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್. ವಾಸುದೇವ ಕನ್ನಡ ಧ್ವಜಾರೋಹಣ ಮಾಡಿದರು. ನಂತರ ಸಾಂಪ್ರದಾಯಿಕ ಉಡುಪಿನೊಂದಿಗೆ ಮಲಯಾಳಿ ಸಮುದಾಯದವರು ಪಾಲ್ಗೊಂಡಿದ್ದ ಓಣಾಘೋಷಂ ಮೆರವಣಿಗೆ ಗಾಂಧಿ ಮೈದಾನದಿಂದ ಹೊರಟು ಜ.ತಿಮ್ಮಯ್ಯ ವೃತ್ತಕ್ಕಾಗಿ ಮುಖ್ಯ ರಸ್ತೆಯಲ್ಲಿ ಸಾಗಿ ಕಾವೇರಿ ಹಾಲ್ ಅನ್ನು ತಲುಪಿತು. ಭುವನೇಶ್ವರಿಯನ್ನು ಹೊತ್ತ ಕನ್ನಡ ರಥ ಕನ್ನಡ ಗೀತೆಯೊಂದಿಗೆ ಮುಂಚೂಣಿ ಯಲ್ಲಿದ್ದರೆ, ವಿವಿಧ ವೇಷಧಾರಿ ಗಳಾಗಿದ್ದ ಪುಟಾಣಿ ಮಕ್ಕಳಿದ್ದ ವಾಹನ ಜೊತೆಯಲ್ಲಿತ್ತು.

(ಮೊದಲ ಪುಟದಿಂದ) ನಡುವಲ್ಲಿ ಚಂಡೆ ಮೇಳದೊಂದಿಗೆ ಬಲಿಚಕ್ರವರ್ತಿಯನ್ನು ಹೊತ್ತಿದ್ದ ದೋಣಿಯ ಸ್ಥಬ್ಧ ಚಿತ್ರ ಗಮನ ಸೆಳೆಯಿತು.

ಒಗ್ಗಟ್ಟಿನ ಸಂದೇಶ

ಕಾವೇರಿ ಹಾಲ್‌ನಲ್ಲಿ ನಡೆದ ಸಮಾರಂಭವನ್ನು ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರುಗಳು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕ ಬೋಪಯ್ಯ ಅವರು; ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಬೇರೆ ಬೇರೆ ಸಮಾಜಗಳಿದ್ದು, ಎಲ್ಲರ ಆಚಾರ-ವಿಚಾರಗಳು ಬೇರೆಯಾಗಿರುತ್ತವೆ. ಆದರೆ, ಎಲ್ಲರೂ ಒಟ್ಟಿಗೆ ಸೇರುವಾಗ ಹಿಂದೂಗಳಾಗಿರುತ್ತೇವೆ, ಹಿಂದೂ ಧರ್ಮವಾಗಿರುತ್ತದೆ. ಅದೇ ರೀತಿ ಮಲಯಾಳಿ ಸಮಾಜದವರು ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸಂಘ ಸ್ಥಾಪನೆ ಮಾಡಿ, ಎಲ್ಲರನ್ನೂ ಒಟ್ಟಿಗೆ ಸೇರಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿರುವದು ಒಗ್ಗಟ್ಟಿನ ಸಂದೇಶ ಸಾರುವ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು. ಮಲಯಾಳಿ ಸಮಾಜದವರು ದೇಶ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ಅಂತಹವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವದು ಸೇನೆಗೆ ಸೇರಲು ಪ್ರೇರೇಪಣೆ ನೀಡಿದಂತಾಗುತ್ತದೆ. ಇದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುತ್ತಿರುವದು ಶ್ಲಾಘನೀಯ ಕಾರ್ಯ. ಇದರ ಜೊತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದಲ್ಲಿ ವಿದ್ಯಾಭ್ಯಾಸದ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಸೌಲಭ್ಯಗಳಿದ್ದು, ಬಳಸಿಕೊಳ್ಳಬೇಕು. ಸ್ವಯಂ ಉದ್ಯೋಗದಲ್ಲೂ ಕೇಂದ್ರ ಸರಕಾರ ಅವಕಾಶ ಕಲ್ಪಿಸಿದ್ದು, ಮೇಕ್ ಇನ್ ಇಂಡಿಯಾದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು. ತಲ ತಲಾಂತರಗಳಿAದ ವಿವಿಧ ವೃತ್ತಿಗಳನ್ನು ಅವಲಂಬಿಸಿಕೊAಡು ನೆಲೆಸಿರುವ ಮಲಯಾಳಿ ಸಮಾಜದವರು ಪರಿಶ್ರಮಿಗಳೆಂದು ಶಾಸಕರು ಬಣ್ಣಿಸಿದರು.

ಬಲಿಷ್ಠ ದೇಶ ಕಟ್ಟಬೇಕು

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ; ಸರಕಾರದಿಂದ ದೊರಕುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವದರೊಂದಿಗೆ ಜನಾಂಗದಲ್ಲಿ ಒಗ್ಗಟ್ಟಾಗುವ ವ್ಯವಸ್ಥೆ ಮಾಡಬೇಕಿದೆ. ಎಲ್ಲರಿಗೂ ಸಮಾಜಗಳಿದ್ದು, ಅನೇಕತೆಯಲ್ಲಿ ಏಕತೆಯನ್ನು ಕಾಣಬೇಕಿದೆ. ನಾಡಿನ ನೆಲ, ಜಲವನ್ನು ಪ್ರೀತಿ ಮಾಡುವದರ ಮೂಲಕ ದೇಶವನ್ನು ಬಲಿಷ್ಠವಾಗಿ ಕಟ್ಟುವ ಕೆಲಸ ಆಗಬೇಕಿದೆ ಎಂದು ಹೇಳಿದರು. ಯೋಧರಿಗೆ ಸನ್ಮಾನ ಮಾಡಿರುವದು ಸೇನೆಗೆ ಸೇರಲು ಪ್ರೋತ್ಸಾಹ ನೀಡಿದಂತಾಗಿದೆ, ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಕುಶಾಲನಗರದಲ್ಲಿ ಸರಕಾರಿ ಇಂಜಿನಿಯರಿAಗ್ ಕಾಲೇಜು ಇದ್ದು, ಫಲಿತಾಂಶದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ, ಶುಲ್ಕವು ತೀರಾ ಕಡಿಮೆಯಿದ್ದು, ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಳ್ಳಬೇಕು. ಅಳುವಾರದಲ್ಲಿ ಸ್ನಾತಕೋತ್ತರ ಕಾಲೇಜಿದ್ದು, ಮುಂದೆ ವಿ.ವಿ. ಆಗಲಿದೆ. ಇಲ್ಲಿಯೂ ಶುಲ್ಕ ಕಡಿಮೆ ಇದೆ, ಇದರೊಂದಿಗೆ ವೈದ್ಯಕೀಯ ಶಿಕ್ಷಣ ಕಾಲೇಜು ಕೂಡ ಇದ್ದು, ಜಿಲ್ಲೆಯ ಸಾಕಷ್ಟು ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ. ಶಿಕ್ಷಣಕ್ಕಾಗಿ ಹೊರಗಡೆ ಹೋಗುವ ಬದಲಿಗೆ ಇಲ್ಲಿಯೇ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಲಯಾಳಿ ಸಂಘದ ವಿದ್ಯಾನಿಧಿಗೆ ರೂ.೧೦ ಸಾವಿರ ಹಣ ಘೋಷಣೆ ಮಾಡಿದರು.

ಮಕ್ಕಳಿಗೆ ಕಲಿಸಲು ಅವಕಾಶ

ಮಡಿಕೇರಿ ನಗರಸಭಾ ಅಧ್ಯಕ್ಷೆ ಎನ್.ಪಿ. ಅನಿತಾ ಪೂವಯ್ಯ ಮಾತನಾಡಿ; ನಮ್ಮ ಮನೆ ಗಟ್ಟಿಯಾಗಿದ್ದರೆ ಸಮಾಜ ಹಾಗೂ ದೇಶ ಗಟ್ಟಿಯಾಗಿರುತ್ತದೆ, ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳಿಂದ ಒಗ್ಗಟ್ಟಿನಲ್ಲಿ ಬಲವಿದೆ, ಬೆಲೆಯಿದೆ ಎಂಬದನ್ನು ತೋರಿಸಿಕೊಟ್ಟಂತಾಗುತ್ತದೆ. ಹಿಂದೂ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವದರಿಂದ ಮಕ್ಕಳು ಕೂಡ ಕಲಯಲು ಅವಕಾಶವಾಗುತ್ತದೆ, ಸಂಸ್ಕೃತಿಯನ್ನು ಬೆಳೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು. ಅಳಿಸಲಾಗದ ಸಂಸ್ಕೃತಿಯನ್ನು ಬೆಳೆಸುತ್ತಿರುವದು ಶ್ಲಾಘನೀಯವೆಂದರು.

ಸAಬAಧಗಳನ್ನು ಬೆಸೆಯುವಂತಿರಬೇಕು

ಹಿAದೂ ಮಲಯಾಳಿ ಸಂಘದ ಅಧ್ಯಕ್ಷ ವಿ.ಎಂ.ವಿಜಯ ಮಾತನಾಡಿ; ನಮ್ಮ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಒಂದು ಸೇರಬೇಕು, ಒಂದೇ ವೇದಿಕೆಯಡಿ ಒಟ್ಟಾಗಬೇಕೆಂಬದು ಉದ್ದೇಶವಾಗಿದೆ. ಸಂಘ ಸ್ಥಾಪನೆಯ ಬಳಿಕ ನಮ್ಮ ಜನಾಂಗದವರು ಎಷ್ಟಿದ್ದಾರೆ ಎಂದು ತಿಳಿದು ಬಂದಿದೆ, ಸಂವಿಧಾನದಲ್ಲಿ ಎಲ್ಲರಿಗೂ ಸಂಘ ಸ್ಥಾಪನೆ ಮಾಡಲು ಅವಕಾಶವಿದ್ದು, ಸಮಾಜಸೇವೆ, ನೊಂದವರಿಗೆ ಸಹಾಯ ಮಾಡುವದು ನಮ್ಮ ಕಾರ್ಯವಾಗಿದೆ ಎಂದು ಹೇಳಿದರು. ಸಮಾಜ ಬಾಂಧವರ ಕಷ್ಟ-ಸುಖಗಳಲ್ಲಿ ಭಾಗಿಗಳಾಗಬೇಕು, ಸಂಬAಧಗಳಿAದ ಮಾತ್ರ ಸಮಾಜ ಉಳಿಯುತ್ತದೆ, ಸಂಬAಧಗಳನ್ನು ಬೆಸೆಯುವ ರೀತಿಯಲ್ಲಿ ಸಮಾಜಗಳಿರಬೇಕು ಎಂದು ಅಭಿಪ್ರಾಯಪಟ್ಟರು.

ಅನುದಾನ ಒದಗಿಸಿ

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್ ಮಾತನಾಡಿ; ೨೦೦೭ರಲ್ಲಿ ಮಲಯಾಳಿ ಸಮಾಜ ಸ್ಥಾಪನೆಯಾಗಿದ್ದು, ಇದೀಗ ಜಿಲ್ಲೆಯಾದ್ಯಂತ ೧೩ ಸಂಘಗಳನ್ನು ರಚನೆ ಮಾಡಲಾಗಿದ್ದು, ಪ್ರತಿ ವರ್ಷ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ೮೦ಸಾವಿರಕ್ಕೂ ಅಧಿಕ ಮಂದಿ ಮಲಯಾಳಿ ಸಮುದಾಯದವರಿದ್ದು, ಶಾಸಕ ಅಪ್ಪಚ್ಚು ರಂಜನ್ ಅವರ ಸಲಹೆಯಂತೆ ಮುಂದಿನ ದಿನಗಳಲ್ಲಿ ಎಲ್ಲ ಸಂಘಗಳನ್ನು ಒಟ್ಟುಗೂಡಿಸಿ ಒಂದೇ ಕಡೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ಸಮಾಜಕ್ಕೆ ಸರಕಾರದಿಂದ ಅನುದಾನ ಒದಗಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಕನ್ನಡ ಬೆಳೆಸಬೇಕು

ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಮಾತನಾಡಿ; ವಿವಿಧ ಕಾರ್ಯಕ್ರಮಗಳ ಮೂಲಕ ಅನೇಕತೆಯಲ್ಲಿ ಏಕತೆಯಿದೆ ಎಂಬದನ್ನು ಮಾಡಿ ತೋರಿಸಿದ್ದೇವೆ, ನಾವು ನಮ್ಮ ಸಂಸ್ಕೃತಿಯಲ್ಲಿ ಇರೋಣ, ಎಲ್ಲ ಸಂಸ್ಕೃತಿಯನ್ನು ಪ್ರೀತಿಸೋಣ. ಕನ್ನಡವನ್ನು ಉಳಿಸಿ ಬೆಳೆಸುವದು ನಮ್ಮ ಕರ್ತವ್ಯವಾಗಿದೆ. ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ಭೂಮಿಯನ್ನು ಎಂದೆAದಿಗೂ ಪೂಜಿಸಬೇಕು. ಮಾತೃ ಭಾಷೆಯೊಂದಿಗೆ ನಾಡಭಾಷೆಗೂ ಗೌರವ ನೀಡಬೇಕೆಂದು ಹೇಳಿದರು.

ನಿವೇಶನಕ್ಕೆ ಪ್ರಯತ್ನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ; ಕನ್ನಡ ರಾಜ್ಯೋತ್ಸವ ಹಾಗೂ ಓಣಾಘೋಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು, ಇದೊಂದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿದೆ. ಸಂಘದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೋಟ್ ಪುಸ್ತಕ, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಶಾಲಾ ಶುಲ್ಕ ಪಾವತಿ, ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಸಹಾಯ, ಮದುವೆ ಸಂದರ್ಭಗಳಲ್ಲಿ ರೂ.೨೫ಸಾವಿರ ಧನ ಸಹಾಯ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಮುಂದಿನ ಸಾಲಿನಿಂದ ಸದಸ್ಯರ ಕುಟುಂಬಕ್ಕೆ ರೂ.೫ಸಾವಿರ ಮರಣ ನಿಧಿಯಡಿ ಸಹಾಯ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇನ್ನೂ ಅನೇಕ ಯೋಜನೆಗಳಿದ್ದು, ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ನಗರದಲ್ಲಿ ಕೆಲವೊಂದು ನಿವೇಶನಗಳನ್ನು ಗುರುತಿಸಲಾಗಿದೆ. ಶಾಸಕರ ಮೂಲಕ ಮಂಜೂರಾತಿಗೆ ಪ್ರಯತ್ನ ಪಡುತ್ತಿರುವದಾಗಿ ಹೇಳಿದರು.

ಇದೇ ಸಂದರ್ಭ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಪೂಕಳಂ ಹಾಗೂ ಸಮುದಾಯದವರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಮುದಾಯದ ಕಲಾವಿದರಿಂದ ಸಾಂಪ್ರದಾಯಿಕ ತಿರುವಾದಿರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಖಜಾಂಚಿ ಕೆ.ಬಾಬು, ಮಡಿಕೇರಿ ಸಂಘದ ಕಜಾಂಚಿ ಪಿ.ಟಿ.ಉತ್ತಮನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ವಿ.ಧರ್ಮೇಂದ್ರ ಸ್ವಾಗತಿಸಿದರೆ, ಬಾಲಕಿ ಹಿಮಾನಿ ತಂಡದವರು ಪ್ರಾರ್ಥಿಸಿದರು. ನಿರ್ದೇಶಕ ಹೆಚ್.ಪಿ.ಅಶೋಕ್ ವಂದಿಸಿದರು.