ಗುಜರಾತ್ನಲ್ಲಿ ಸೇತುವೆ ದುರಂತ: ಮೃತಪಟ್ಟವರ ಸಂಖ್ಯೆ ೧೪೧ಕ್ಕೆ ಏರಿಕೆ
ಮೊರ್ಬಿ, ಅ. ೩೧: ಗುಜರಾತ್ ರಾಜಧಾನಿ ಗಾಂಧಿನಗರದಿAದ ಸುಮಾರು ೩೦೦ ಕಿ.ಮೀ ದೂರದಲ್ಲಿರುವ ಮೊರ್ಬಿಯಲ್ಲಿ ಭಾನುವಾರ ನಡೆದ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ೧೪೧ಕ್ಕೆ ಏರಿಕೆಯಾಗಿದ್ದು, ಇದುವರೆಗೆ ೧೭೭ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ವಾಯುಪಡೆ, ಸೇನೆ ಮತ್ತು ನೌಕಾಪಡೆಯ ತಂಡಗಳು, ಸ್ಥಳೀಯ ಸಿಬ್ಬಂದಿ ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ತಾ. ೧ ರಂದು (ಇಂದು) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ೧೪೧ ಮಂದಿಯನ್ನು ಬಲಿ ಪಡೆದ ಗುಜರಾತ್ನ ಮೊರ್ಬಿಯ ತೂಗು ಸೇತುವೆಯನ್ನು ನವೀಕರಿಸಿದ್ದ ಒರೆವಾ ಕಂಪನಿಯ ವ್ಯವಸ್ಥಾಪಕರು, ಪ್ರವೇಶಕ್ಕೆ ಟಿಕೆಟ್ ನೀಡಿದ ಇಬ್ಬರು ಸಿಬ್ಬಂದಿ, ಇಬ್ಬರು ಗುತ್ತಿಗೆದಾರರು, ಮೂವರು ಭದ್ರತಾ ಸಿಬ್ಬಂದಿ ಸೇರಿ ೯ ಮಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಇದು ದೇಶ ಕಂಡ ಅತ್ಯಂತ ಘೋರ ದುರಂತವಾಗಿದೆ. ಫಿಟ್ನೆಸ್ ಪ್ರಮಾಣಪತ್ರ ಪಡೆಯದೆ ಮತ್ತು ಅವಧಿಗೂ ಮುನ್ನವೇ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂಬ ಆರೋಪಗಳು ಒರೆವಾ ವಿರುದ್ಧ ಕೇಳಿಬಂದಿದೆ. ೧೫ ವರ್ಷಗಳ ಕಾಲ ಸೇತುವೆಯ ನಿರ್ವಹಣೆ ಮತ್ತು ಉಸ್ತುವಾರಿ ವಹಿಸಿಕೊಂಡ ಒರೆವಾ ಕಂಪನಿಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಶತಮಾನದಷ್ಟು ಹಳೆಯದಾದ, ಕೇವಲ ೧೫೦ ರಿಂದ ೨೦೦ ಜನ ಸಾಮರ್ಥ್ಯದ ಸೇತುವೆ ಪ್ರವೇಶಿಸಲು ಬರೋಬ್ಬರಿ ೬೫೦ ಜನರಿಗೆ ಟಿಕೆಟ್ ನೀಡಲಾಗಿದ್ದು, ಇದು ದುರಂತಕ್ಕೆ ಕಾರಣವಾಯಿತು ಎಂಬ ಮಾತುಗಳು ಕೇಳಿಬರುತ್ತಿದೆ.
ಪಾಕ್ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಮಾನನಷ್ಟ ಮೊಕದ್ದಮೆ: ಇಮ್ರಾನ್ ಖಾನ್
ಇಸ್ಲಾಮಾಬಾದ್, ಅ. ೩೧: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮನ್ನು ಅನರ್ಹಗೊಳಿಸುವ ಮೂಲಕ ಪ್ರತಿಷ್ಠೆಗೆ ಧಕ್ಕೆ ತರಲಾಗಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ೧೦ ಬಿಲಿಯನ್ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸೋಮವಾರ ಘೋಷಿಸಿದ್ದಾರೆ. ತಮ್ಮ ಸುದೀರ್ಘ ಪಾದಯಾತ್ರೆಯ ನಾಲ್ಕನೇ ದಿನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಉಚ್ಚಾಟಿತ ಪ್ರಧಾನಿ, ಇಸ್ಲಾಮಾಬಾದ್ಗೆ ಪಾದಯಾತ್ರೆ ನಡೆಸುವ ಮೂಲಕ ಹಖೀಕಿ ಆಜಾದಿ(ನೈಜ ಸ್ವಾತಂತ್ರ್ಯ) ಗಳಿಸುವುದು ತಮ್ಮ ಉದ್ದೇಶವಾಗಿದೆ. ತಕ್ಷಣವೇ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆದರೆ ಅದು ಸಾಧ್ಯ ಎಂದು ಹೇಳಿದರು. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯಸ್ಥ ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ ಐವರು ಸದಸ್ಯರ ಸಮಿತಿಯು ೭೦ ವರ್ಷದ ಇಮ್ರಾನ್ ಖಾನ್ ಅವರನ್ನು ಪ್ರಸ್ತುತ ರಾಷ್ಟಿçÃಯ ಅಸೆಂಬ್ಲಿಯ ಸದಸ್ಯತ್ವದಿಂದ ಅನರ್ಹಗೊಳಿಸಿತ್ತು. "ಸಿಕಂದರ್ ಸುಲ್ತಾನ್, ನಾನು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ ... ಇದರಿಂದ ಭವಿಷ್ಯದಲ್ಲಿ, ಬೇರೆಯವರ ಸೂಚನೆ ಮೇರೆಗೆ ನೀವು ಬೇರೆ ಯಾರ ಪ್ರತಿಷ್ಠೆಯನ್ನು ಹಾಳು ಮಾಡಬಾರದು" ಎಂದು ಇಮ್ರಾನ್ ಖಾನ್ ಕಾಮೋಂಕಿಯಲ್ಲಿ ಹೇಳಿದ್ದಾರೆ.
ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ
ಚಿತ್ರದುರ್ಗ, ಅ. ೩೧: ತೀವ್ರ ಮದ್ಯಪಾನದ ಚಟಕ್ಕೆ ಒಳಗಾಗಿದ್ದ ಪತಿಯ ಕಿರುಕುಳ ತಾಳಲಾರದೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಹಿಳೆ ಚೆಕ್ ಡ್ಯಾಂಗೆ ಹಾರಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಚಾನಕಲ್ ಲಂಬಾಣಿ ಹಟ್ಟಿಯ ೨೮ ವರ್ಷದ ಅರ್ಪಿತಾ ತನ್ನಿಬ್ಬರು ಮಕ್ಕಳಾದ ಮಗಳು ೬ ವರ್ಷದ ಮಾನಸ ಮತ್ತು ಮಗ ೪ ವರ್ಷದ ಮದನ್ ಜೊತೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾಳಿಗೆ ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಜೊತೆ ೮ ವರ್ಷಗಳ ಹಿಂದೆ ಮದುವೆಯಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದರೂ ವರ್ಷಗರುಳಿದಂತೆ ಮಂಜಾನಾಯ್ಕ್ಗೆ ಪತ್ನಿ ಮೇಲೆ ಅನುಮಾನ ಕಾಡುತ್ತಿತ್ತು. ಇದರ ಜೊತೆಗೆ ನಿತ್ಯವೂ ಮದ್ಯಪಾನ ಮಾಡಿ ಮನೆಗೆ ಬಂದು ಅರ್ಪಿತಾಗೆ ಕಿರುಕುಳ ನೀಡುತ್ತಿದ್ದ. ಇದರಿಂದ ತೀವ್ರ ಮನನೊಂದ ಅರ್ಪಿತಾ ತನ್ನಿಬ್ಬರು ಮಕ್ಕಳನ್ನು ಚೆಕ್ ಡ್ಯಾಂ ಬಳಿ ಕರೆದುಕೊಂಡು ಹೋಗಿ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸೆಲ್ಫಿ ವೇಳೆ ಪುಟ್ಟ ಬಾಲಕ ಮದನ್ ಅಪ್ಪ ಎಂದು ಕೂಗಿರುವ ವೀಡಿಯೋ ವೈರಲ್ ಆಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಪುನೀತ್ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು, ಅ. ೩೧: ತಾ. ೧ ರಂದು (ಇಂದು) ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಸಂಜೆ ವಿಧಾನಸೌಧದ ಮುಂಭಾಗ ನಡೆಯುವ ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ದಿವಂಗತ ಡಾ. ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ನ. ೨ ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಜಗತ್ತಿನಾದ್ಯಂತ ಪ್ರಮುಖ ಉದ್ದಿಮೆಗಳು, ಉದ್ದಿಮೆಗಳ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಸುಮಾರು ೫ ಲಕ್ಷ ಕೋಟಿ ರೂ.ಯಷ್ಟು ಹೂಡಿಕೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಹಲವು ಉದ್ದಿಮೆದಾರರು ಬಂದು ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಅಂತಹವರಿಗೆ ಭರವಸೆ ಪತ್ರ ನೀಡಲಾಗುವುದು ಎಂದರು.