ಮಡಿಕೇರಿ, ನ. ೧: ೨೧ನೇ ಶತಮಾನದಲ್ಲಿ ಕನ್ನಡ ಭಾಷೆಯು ಆಧುನೀಕರಣಗೊಂಡಿದೆಯಾದರೂ ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಅಭಿಪ್ರಾಯಪಟ್ಟರು. ೬೭ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಡಗು ಜಿಲ್ಲಾಡಳಿತ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಅವರು ಮಾತನಾಡಿದರು. ಈ ಮಣ್ಣಿಗೊಂದು, ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ. ಆದ್ದರಿಂದ ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ಎಲ್ಲರು ಮಾಡುವಂತೆ ಕರೆ ನೀಡಿದರು. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪಸರಿಸುವಲ್ಲಿ ಸರಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕಳೆದ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಮಾತಾಡ್ ಮಾತಾಡು ಕನ್ನಡ’ ಹಾಗೆಯೇ ಈ ವರ್ಷ ನೂತನ ಕಾರ್ಯಕ್ರಮವಾದ ‘ಕೋಟಿ ಕಂಠ ಗಾಯನ’ ಮೂಲಕ ನಾಡಿನಾದ್ಯಂತ ಸಹಸ್ರಾರು ಕನ್ನಡಾಭಿಮಾನಿಗಳು ಒಂದೇ ಸಮನೆ ಕನ್ನಡ ಗೀತೆಗಳನ್ನು ಹಾಡುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಕನ್ನಡತನವನ್ನು ಮೆರೆದಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಇಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಮ್ಮ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಇಂತಹ ಮಹಾನ್ ಚೇತನರನ್ನು ಸ್ಮರಿಸುವಂತಾಗಬೇಕೆAದರು. ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ. ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವವಾಗಬೇಕು ಎಂದು ಆಶಿಸಿದರು.

ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಹಾಗೂ ಸಾಹಿತ್ಯದ ಹಿರಿಮೆ ವಿಶ್ವವ್ಯಾಪಿಯಾಗಿದ್ದು, ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಮುಂತಾದ ಕವಿಗಳು ಕನ್ನಡ ಭಾಷಾ ದೀವಿಗೆಯನ್ನು ಆಗಸದೆತ್ತರಕ್ಕೆ ಬೆಳಗಿಸಿದ್ದಾರೆ. ಪುರಂದರದಾಸ, ಕನಕದಾಸರ ಭಕ್ತಿಪಂಥ ಮತ್ತು ಕೀರ್ತನೆಗಳ ಮೂಲಕ ಹಾಗೂ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಅದ್ಭುತವಾದ ಸಾಮಾಜಿಕ ಕ್ರಾಂತಿ ಮಾಡಿ ಕನ್ನಡ ನಾಡು-ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ. ಸಾಹಿತ್ಯ ಸಂಸ್ಕೃತಿ, ಸಂಗೀತ, ಸದಾಭಿರುಚಿ, ಸಂಪ್ರದಾಯ, ಸಂಸ್ಕಾರ ಯಾವುದೇ ಕ್ಷೇತ್ರದಲ್ಲೂ ಕನ್ನಡಿಗರು ಕಡಿಮೆಯಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎಂದರು.

ಸ್ವಾತAತ್ರö್ಯ ಪೂರ್ವದಲ್ಲಿ ವಿವಿಧ ಕಾರಣಗಳಿಂದ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಭಾಷಾವಾರು ಪುನರ್ ವಿಂಗಡಣೆಯ ಆಧಾರದ ಮೇಲೆ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ಇರುವ ಪ್ರದೇಶಗಳನ್ನು ಒಟ್ಟುಗೂಡಿಸುವಲ್ಲಿ ಇದು ಯಶಸ್ವಿಯೂ ಆಯಿತು. ಕನ್ನಡ ನಾಡು-ನುಡಿಗೆ ೨ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ೨ ಸಾವಿರ ವರ್ಷಗಳ ಹಿಂದೆಯೇ ಈ ಭಾಷೆಯನ್ನು ಮಾತನಾಡುವ ಜನ ಇದ್ದರು ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಕ್ರಿ.ಶ ೪೫೦ರ ಕನ್ನಡ ಭಾಷೆಯ ಮೊಟ್ಟ ಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ ೮೫೦ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ ಎಂಬುದಾಗಿ ತಿಳಿಸಿದರು.

ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆಶಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳೆಯರಿಂದ ನಾಡಗೀತೆ ಹಾಗೂ ರೈತಗೀತೆ ಮೂಡಿಬಂತು.

(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷÀ ನಾಪಂಡ ರವಿ ಕಾಳಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ನಗರಸಭೆ ಅಧ್ಯಕ್ಷೆ ಎನ್.ಪಿ. ಅನಿತಾ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಜಿ.ಪಂ. ಸಿಇಓ ಡಾ. ಎಸ್. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಹಲವು ಇಲಾಖೆಯ ಅಧಿಕಾರಿಗಳು ಇದ್ದರು.

ರಾಜ್ಯೋತ್ಸವದ ಪ್ರಯುಕ್ತ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ೧೮ ತಂಡಗಳಿAದ ಪಥಸಂಚಲನ ನಡೆಯಿತು. ಡಿ.ಎ.ಆರ್., ನಾಗರಿಕ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಎಫ್.ಎಂ.ಕೆ.ಎA.ಸಿ. ಕಾಲೇಜಿನ ಎನ್.ಸಿ.ಸಿ. ತಂಡ, ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿನ ಸೇವಾದಳ ತಂಡ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಎನ್.ಸಿ.ಸಿ., ಜನರಲ್ ತಿಮ್ಮಯ್ಯ ವಿದ್ಯಾಸಂಸ್ಥೆಯ ಎನ್.ಸಿ.ಸಿ., ಸಂತ ಜೋಸೆಫರ ಹಾಗೂ ಗಾಳಿಬೀಡು ನವೋದಯ ಶಾಲೆಯ ಎನ್.ಸಿ.ಸಿ. ವಿದ್ಯಾರ್ಥಿಗಳು, ಸಂತ ಜೋಸೆಫರ ಶಾಲೆ, ಸಂತ ಮೈಕಲರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು, ರಾಜರಾಜೇಶ್ವರಿ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸೇವಾದಳ ತಂಡ, ಸಂತ ಮೈಕಲರ ಶಾಲೆಯ ಸೇವಾದಳ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡವು. ಕವಾಯತು ಮುಖ್ಯಸ್ಥರಾಗಿ ಪೊಲೀಸ್ ಅಧಿಕಾರಿ ಚನ್ನನಾಯಕ ಅವರು ಭಾಗವಹಿಸಿದರು.

ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಎನ್.ಸಿ.ಸಿ. ಅಲ್ಲದ ತಂಡಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಇದರಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸೇವಾದಳ ತಂಡ ಪ್ರಥಮ, ಸರಕಾರಿ ಪದವಿಪೂರ್ವ ಕಾಲೇಜಿನ ಸೇವಾದಳ ತಂಡ ದ್ವಿತೀಯ ಹಾಗೂ ಸಂತ ಮೈಕಲರ ಕನ್ನಡ ಮಾಧ್ಯಮ ಶಾಲೆಯ ಸೇವಾದಳದ ತಂಡ ತೃತೀಯ ಸ್ಥಾನ ಪಡೆದುಕೊಂಡವು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಶಾಲಾ ಮಕ್ಕಳಿಂದ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಸಂತ ಜೋಸೆಫರ ಪೌಢಶಾಲಾ, ರಾಜರಾಜೇಶ್ವರಿ ಪ್ರೌಢಶಾಲೆ, ಕ್ರೆಸೆಂಟ್ ಶಾಲೆ, ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು ವಿವಿಧ ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕಿ ನೆರೆದಿದ್ದವರ ಮನರಂಜಿಸಿದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ತಂಡದಿAದ ಅತ್ಯುತ್ತಮ ವಾದ್ಯಗೋಷ್ಠಿ ಮೂಡಿಬಂತು.ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಮುನ್ನ ನಗರದ ಕೋಟೆ ಆವರಣದಿಂದ ವಿವಿಧ ಇಲಾಖೆಗಳಿಂದ ತಯಾರಿಸಲ್ಪಟ್ಟ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಸಾಗಿದವು. ಮೆರವಣಿಗೆಗೆ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ಚಾಲನೆ ನೀಡಿದರು.

ನಗರದ ಸ್ವಚ್ಛತೆಯನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಪರಿಗಣಿಸಿ, ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಹಾಗೂ ಪರಿಸರ ಸ್ನೇಹಿ ಪರ್ಯಾಯ ಸಾಮಗ್ರಿಗಳನ್ನು ಬಳಸಲು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ನಗರಸಭೆಯಿಂದ ತಯಾರಿಸಲಾಗಿತ್ತು, ಮಾನವ-ಪ್ರಾಣಿ ಸಂಘರ್ಷ ನಿರ್ವಹಣೆ ತಡೆಯಲು ಅರಣ್ಯ ಇಲಾಖೆಯ ಹಲವು ಯೋಜನೆಗಳ ಮಾಹಿತಿ ಹಾಗೂ ವಿವಿಧ ಕಾಡು ಪ್ರಾಣಿಗಳಾದ ಆನೆ, ಜಿಂಕೆ, ಚಿರತೆಗಳ ಮಾದರಿಗಳನ್ನೊಳಗೊಂಡ ಅರಣ್ಯ ಇಲಾಖೆಯ ಸ್ತಬ್ಧಚಿತ್ರ, ಸಖಿ ಒನ್ ಸ್ಟಾಪ್ ಸೆಂಟರ್ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವು ಯೋಜನೆ, ಸೌಲಭ್ಯಗಳನ್ನು ಬಿಂಬಿಸುವ ಸ್ತಬ್ಧಚಿತ್ರ, ಕೃಷಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಅರಣ್ಯ ಇಲಾಖೆಯ ಸ್ತಬ್ಧಚಿತ್ರಕ್ಕೆ ಮೊದಲನೆಯ ಬಹುಮಾನ, ನಗರಸಭೆಯ ಸ್ತಬ್ಧಚಿತ್ರಕ್ಕೆ ಎರಡನೆಯ ಬಹುಮಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರಕಿತು.