ಸೋಮವಾರಪೇಟೆ, ಅ. ೩೦: ೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತ, ಸಾಮಾಜಿಕ ಅರಣ್ಯ ವಲಯ ಹಾಗೂ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ತಾಲ್ಲೂಕಿನ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಶೀಲ್ದಾರ್ ನರಗುಂದ ಅವರು ಮಾತನಾಡಿ, ಈ ರೀತಿ ಸ್ಪರ್ಧೆಗಳು ಕನ್ನಡ ನಾಡು, ನುಡಿ ಸಂಸ್ಕೃತಿ ಸಂರಕ್ಷಿಸುವಲ್ಲಿ ಮಕ್ಕಳಿಗೆ ಅರಿವು ಮೂಡಿಸುತ್ತದೆ ಎಂದರು. ಸಾಮಾಜಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಗಾನಶ್ರೀ ಕೆ.ವಿ. ಅವರು ಮಾತನಾಡಿ, ಸುಶಿಕ್ಷಿತ ಶಿಕ್ಷಣದಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ಮಕ್ಕಳಿಗೆ ಸ್ಪರ್ಧೆಗಳು ಏರ್ಪಡಿಸಿದಾಗ ಅವರ ವಿವೇಚನಾ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ ಎಂದು ಅಭಿಪ್ರಾಯಿಸಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೇತನ್ ಕುಮಾರ್, ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿಮಲ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ಸರ್ಕಾರಿ ಶಾಲೆಯ ಮುಖ್ಯಸ್ಥೆ ಅಣ್ಣಮ್ಮ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ್, ದೈಹಿಕ ಶಿಕ್ಷಣ ಸಂಯೋಜಕಿ ಸುಕುಮಾರಿ ,ಚೆಂಬು ಪ್ರೌಢಶಾಲಾ ಶಿಕ್ಷಕ ಡಾ. ಯೋಗೇಶ್, ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ, ಅರಣ್ಯ ರಕ್ಷಕ ಚಂದ್ರೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಮತ ಅವರುಗಳು ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತ ಮಕ್ಕಳಿಗೆ ಕನ್ನಡ ರಾಜ್ಯೋತ್ಸವ ಸಮಾರಂಭದAದು ನಗದು ಬಹುಮಾನ ನೀಡಲಾಗುವುದು ಎಂದು ಸಾಮಾಜಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಗಾನಶ್ರೀ ಕೆ.ವಿ. ತಿಳಿಸಿದರು.