ಸೋಮವಾರಪೇಟೆ, ಅ. ೩೦: ರಾಜ್ಯಪ್ರಶಸ್ತಿ ವಿಜೇತರಾದ ಸಮೀಪದ ನೇರುಗಳಲೆ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎಸ್.ಎಂ. ಇಬ್ರಾಹಿಂ ಅವರನ್ನು ನೇರುಗಳಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಅವರುಗಳ ಆಶ್ರಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಕಳೆದ ೧೪ ವರ್ಷಗಳಿಂದ ನೇರುಗಳಲೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ರಾಹಿಂ ಅವರ ಕರ್ತವ್ಯ ಮತ್ತು ಸಾಧನೆಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರು ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಸ್ವಾಮೀಜಿಗಳು, ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಇಂತಹ ಉತ್ತಮ ಶಿಕ್ಷಕರನ್ನು ಗುರುತಿಸಿ ರಾಜ್ಯಪ್ರಶಸ್ತಿ ನೀಡಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಸದಸ್ಯರುಗಳಾದ ಸಂಭ್ರಮ್, ಪ್ರಕಾಶ್, ಅಜಿತ್‌ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ. ಸಾಮಾಜಿಕ ಕಾರ್ಯಕರ್ತೆ ಎಂ.ಎ. ರುಬೀನಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪದ್ಮಾವತಿ, ಶಾಲಾ ಮುಖ್ಯ ಶಿಕ್ಷಕ ಕೃಷ್ಣೇಗೌಡ ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.