ಮಡಿಕೇರಿ, ಅ. ೩೦: ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ನಾಡಿನ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿದ್ದರು, ಇವೆಲ್ಲದರ ಜೊತೆಗೆ ಅವರು ಮಾನವತಾವಾದಿಯಾಗಿದ್ದರು, ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಸ್ವತಃ ತಾವೇ ಪ್ರಜೆಗಳ ಮಧ್ಯ ತೆರಳಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತಿದ್ದರು ಎಂದು ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ನುಡಿದರು. ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿಯ ಎ.ಎಲ್. ಜಿ ಕ್ರೆಸೆಂಟ್ ಶಾಲೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ಮುಂದುವರೆದ ಅವರು ಮೈಸೂರು ಸಂಸ್ಥಾನದ ಅರಸು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಿವಾನರಾಗಿ ಆರ್ಥಿಕ ಸಾಂಸ್ಕೃತಿಕ ಮತ್ತು ನಗರ ಸೌಂದರ್ಯದ ಅಭಿವೃದ್ಧಿ ಗಾಗಿ ತಮ್ಮ ಸೇವೆಯನ್ನು ಮುಡುಪಾ ಗಿಟ್ಟಿದ್ದರು. ಮೈಸೂರು ಸಂಸ್ಥಾನದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಂಡಿದ್ದರು. ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಮೊದಲಾದ ಕೈಗಾರಿಕಾ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ವಿದ್ಯುದ್ದೀಕರಣದ ವ್ಯವಸ್ಥೆ ಮಾಡಿದ್ದಲ್ಲದೆ ಅದನ್ನು ಹಳ್ಳಿಗಳಿಗೂ ವಿಸ್ತರಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದರು ಎಂಬ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕನ್ನಡ ನಾಡು ಕಂಡ ಭಾಗ್ಯ ಸರ್ ಮಿರ್ಜಾ ಇಸ್ಮಾಯಿಲ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳ ದೂರದರ್ಶಿತ್ವದಿಂದಾಗಿ ಇಂದು ಶತಮಾನ ಆಚರಿಸುತ್ತಿರುವಂತಹ ಹಲವಾರು ಸಂಸ್ಥೆಗಳು ಪ್ರಾರಂಭ ಗೊಂಡವು. ಕರ್ನಾಟಕವನ್ನು ಪ್ರಪಂಚದ ಅತ್ಯಂತ ಉತ್ತಮವಾದ ರಾಜ್ಯ ಎಂದು ಪ್ರತಿಪಾದಿಸುವಲ್ಲಿ ಶ್ರಮಿಸಿದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ರೆಸೆಂಟ್ ಶಾಲೆಯ ಪ್ರಾಚಾರ್ಯರಾದ ಜೋಯ್ಸಿ ವಿನಯ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಉತ್ತಮವಾದ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿದ್ದನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕ್ರೆಸೆಂಟ್ ಶಾಲೆಯ ವಕ್ತಾರರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆದ ಎಸ್.ಐ. ಮುನೀರ್ ಅಹ್ಮದ್ ಅವರು ಮಾತನಾಡುತ್ತಾ ಮಿರ್ಜಾ ಇಸ್ಮಾಯಿಲ್ ರವರು ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳುವ ಮತ್ತು ಅದನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ದತ್ತಿ ಕಾರ್ಯಕ್ರಮಗಳ ಮುಖಾಂತರ ನಾಡಿನ ಹಿರಿಯರನ್ನು, ಅವರು ಮಾಡಿದ ಸೇವೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಕಾರ್ಯವನ್ನು ಸಹ ಸಾಹಿತ್ಯ ಪರಿಷತ್ ಮಾಡುತ್ತಿದೆ ಮಿರ್ಜಾ ಇಸ್ಮಾಯಿಲ್ ಅವರು ಹಿಂದೂ ಮುಸಲ್ಮಾನ ಎರಡು ಧರ್ಮಗಳ ಮಧ್ಯೆ ಸಮನ್ವಯ ಬೆಸೆಯುವ ಕೊಂಡಿಯAತಿದ್ದರು ಎಂದು ಹೇಳಿದರು. ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ಹನೀಫ್ ಮಾತನಾಡಿದರು. ವೇದಿಕೆಯಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಬೆಕಲ್ ನವೀನ್ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಸುಲ್ಹತ್ ನಿರೂಪಿಸಿದರು. ಸುಜ್ಯೋತಿ ಮತ್ತು ರೇಷ್ಮಾ ಅವರು ಭಾವಗೀತೆ ಹಾಡಿದರೆ, ರಶೀದಾ ಅವರು ಸ್ವರಚಿತ ಕವನ ವಾಚನ ಮಾಡಿದರು. ಶೈಲಾ ಸ್ವಾಗತಿಸಿ, ಸುಜ್ಯೋತಿ ವಂದಿಸಿದರು.