*ಗೋಣಿಕೊಪ್ಪ, ಅ. ೩೦: ಪೈಲೆಟ್ ಯೋಜನೆಯಲ್ಲಿ ಆಯ್ಕೆಯಾದ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡುವುದರಿಂದ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ೫ ವರ್ಷದ ಕಾರ್ಯಕ್ರಮಗಳು ಸಫಲವಾಗುವುದು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ.ಜಿ ಬೋಪಯ್ಯ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಮೂಲಭೂತ ಸೌಕರ್ಯಗಳಷ್ಟೇ ಅಲ್ಲದೆ ಇನ್ನಿತರ ಅಗತ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ. ಜನರ ಆಡಳಿತ ಎಂದ ಮೇಲೆ ಅದು ಜನಪರವಾಗಿಯೇ ಇರಬೇಕು ಅಧಿಕಾರಿಗಳು ಹಾಕಿ ಕೊಟ್ಟ ಯೋಜನೆಯಲ್ಲಿ ಜನರಿಗೆ ಪ್ರಯೋಜನಕಾರಿ ಅಗತ್ಯಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಬದಲಾವಣೆಗಾಗಿ ಸರ್ಕಾರ ಚಿಂತನೆ ಹರಿಸುತ್ತಿದೆ ಎಂದು ಹೇಳಿದರು.

ಗ್ರಾಮದಿಂದ ಗ್ರಾಮಕ್ಕೆ ತನ್ನದೇ ಆದ ಅಗತ್ಯತೆಗಳು ಇರುತ್ತವೆ ಮತ್ತು ಅದರದೇ ಆದ ಸಮಸ್ಯೆಗಳು ಇರುತ್ತವೆ ಅದನ್ನು ಮನಗಂಡು ಬಗೆಹರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖೆಯ ಮೇಲಾಧಿಕಾರಿಗಳು ಯೋಜನೆ ರೂಪಿಸಬೇಕಾಗಿದೆ. ಈ ಕ್ರಮ ಬದಲಾವಣೆಯ ಸೂಕ್ತತೆಯನ್ನು ಕಾಣಬೇಕಾಗಿದೆ ಎಂದು ತಿಳಿಸಿದರು.

ಐದು ವರ್ಷದಲ್ಲಿ ಗ್ರಾಮದ ಬದಲಾವಣೆ ಎಂಬ ಯೋಜನೆ ಅಗತ್ಯತೆ ಇದ್ದರೂ ಕೂಡ ಇಂದಿಗೂ ವಸತಿ ಹೊಂದದವರು ಬಹು ಸಂಖ್ಯೆಯಲ್ಲಿದ್ದಾರೆ. ಅವರ ಅಗತ್ಯವನ್ನು ಪೂರೈಸಲು ಗ್ರಾಮ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದರೆ ಉತ್ತಮ ಬೆಳವಣಿಗೆಯಾಗುತ್ತದೆ ಎಂದು ಸೂಚಿಸಿದರು.

ಗ್ರಾಮ ಸಭೆಗಳಲ್ಲಿ ಚರ್ಚೆಯಾಗುವ ಮತ್ತು ಬೇಡಿಕೆ ಇರುವ ಕಾರ್ಯಗಳನ್ನು ಪೂರೈಸಲು ಬೇಕಾದ ಅನುದಾನವನ್ನು ಆಯಾ ಗ್ರಾಮ ಪಂಚಾಯಿತಿಗೆ ಒದಗಿಸಿದಾಗ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದರು.

ಎ ಗ್ರೇಡ್ ಪಂಚಾಯಿತಿ ಎಂದು ಗುರುತಿಸಿದ ಪಂಚಾಯಿತಿಗೆ ಹೆಚ್ಚಿನ ಅನುದಾನವನ್ನು ನೀಡಲು ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡದೆ ಇರುವುದು ಯಾವ ರೀತಿಯ ಪಂಚವಾರ್ಷಿಕ ಅಭಿವೃದ್ಧಿ ಯೋಜನೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಮಾತನಾಡಿ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಿದಾಗ ಪೂರ್ಣವಾದ ಕಾರ್ಯಕ್ರಮವನ್ನು ಜನರೆಡೆಗೆ ಕೊಂಡೊಯ್ಯಲು ಸಾಧ್ಯವಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಒಮ್ಮತದಿಂದ ಕೆಲಸ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ. ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದಾಗ ಗ್ರಾಮದ ಸಮಸ್ಯೆಯನ್ನು ಹಂತ ಹಂತವಾಗಿ ನೀಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಅಧಿಕಾರಿಗಳು ಕಾಳಜಿ ಮತ್ತು ಜನರ ಮೇಲಿನ ಪ್ರೀತಿಯನ್ನು ಹೊಂದಿರಬೇಕು ಎಂದು ಹೇಳಿದರು.

ಪೊನ್ನಂಪೇಟೆ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ ಹಾಗೂ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು. ಪೊನ್ನಂಪೇಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಅವರು ಪೊನ್ನಂಪೇಟೆ ಗ್ರೇಡ್ ೧ ಪಂಚಾಯಿತಿಯಾಗಿ ಗುರುತಿಸಿಕೊಳ್ಳಲು ತೆಗೆದುಕೊಂಡ ಕಾರ್ಯಕ್ರಮಗಳ ಬಗ್ಗೆ ಸವಿಸ್ತ್ತಾರವಾಗಿ ಸಭೆಗೆ ತಿಳಿಸಿದರು. ಪೊನ್ನಂಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರಿಜಾ ವೆಂಕಟೇಶ್ ಮತ್ತು ಉಪಾಧ್ಯಕ್ಷೆ ದಶಮಿ ಸದಾ ಇದ್ದರು. -ಎನ್.ಎನ್. ದಿನೇಶ್