ಭಾರತದ ಪ್ರಥಮ ಸ್ವಾತಂತ್ರö್ಯ ಸಂಗ್ರಮ ೧೮೫೭ರಲ್ಲಿ ಪ್ರಾರಂಭವಾಯಿತು. ಆದರೆ ನಮ್ಮ ಅವಿಭಜಿತ ಕೊಡಗು ರಾಜ್ಯದಲ್ಲಿ ಪ್ರಥಮ ಸ್ವಾತಂತ್ರö್ಯ ಸಂಗ್ರಮಕ್ಕಿAತಲೂ ಇಪ್ಪತ್ತು ವರ್ಷ ಮೊದಲು, ಸ್ವಾತಂತ್ರö್ಯ ಸಂಗ್ರಮದ ಕಿಚ್ಚನ್ನು ಕೊಡಗಿನ ಕೆಲವೇ ಕೆಲವು ಸ್ವಾಭಿಮಾನಿಗಳು ಹಚ್ಚಿ, ಕೆಚ್ಚೆದೆಯಿಂದ ನೇಣುಗಂಬವನ್ನು ಏರಿ ಪ್ರಾಣಾರ್ಪಣೆಯನ್ನು ಮಾಡಿರುವ ವೀರಾಗ್ರಣಿಗಳಲ್ಲಿ ಮೊದಲಿಗರು ನಮ್ಮ ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು. ಆ ಮೂಲಕ ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರವರು ಅಜರಾಮರರಾಗಿರುವರು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರವರು ಕೊಡಗಿನ ಬಲಮರಿ ಗ್ರಾಮದ ಗುಡ್ಡೆಮನೆ ಸುಬ್ಬಪ್ಪನವರ ಪ್ರಥಮ ಪುತ್ರನಾಗಿ ಕ್ರಿ.ಶ ೧೭೯೨ರಲ್ಲಿ ಜನಿಸಿದರು. ಬಾಲ್ಯದಲ್ಲಿ ತುಂಬಾ ಸ್ವಾಭಿಮಾನಿ ತರುಣರಾಗಿದ್ದರು. ಅವರ ಮಡದಿ ಅಕ್ಕಮ್ಮ. ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯ ಕಾಲದಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕವೀರರಾಜರ ಆಳ್ವಿಕೆಯ ಕಾಲ ಘಟ್ಟದಲ್ಲಿ ಇವರ ಸ್ವಾಭಿಮಾನ, ಸ್ವಾಮಿ ನಿಷ್ಠೆಯನ್ನು ಪರಿಗಣಿಸಿ ಸುಬೇದಾರ್‌ರಾಗಿ ಮುಂಬಡ್ತಿಯನ್ನು ಪಡೆದಿದ್ದರು. ಅವರಲ್ಲಿದ್ದ ಶೂರತನವನ್ನು ಕಂಡು ಕೊಡಗಿನ ಅಂದಿನ ರಾಜ ಲಿಂಗರಾಜರು ಅಪ್ಪಯ್ಯಗೌಡರಿಗೆ ಓಡಾಡಲು ಕುದುರೆಯನ್ನು ನೀಡಿದರು. ಅಪ್ಪಯ್ಯಗೌಡರು ಕೊಡಗಿನಾದ್ಯಂತ ಕುದುರೆಯ ಮೂಲಕ ಓಡಾಡುತ್ತಿದ್ದರು.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ೧೮೩೧ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪದಚ್ಯುತಗೊಳಿಸಿ ಆಡಳಿತ ಚುಕ್ಕಾಣಿಯನ್ನು ಹಿಡಿದರು.ನಂತರ ಅವಿಭಜಿತ ಕೊಡಗು ರಾಜ್ಯವನ್ನು ಆಕ್ರಮಿಸಲು ದುರುಳ ಬ್ರಿಟಿಷರು ಮುಂದಾದರು. ಕೊಡಗಿನ ಹಾಲೇರಿ ವಂಶದ ದೊಡ್ಡವೀರರಾಜೇಂದ್ರ ಮತ್ತು ಲಿಂಗರಾಜೇAದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಕೊಡಗು ರಾಜ್ಯದ ಕೊನೆಯ ರಾಜ ಚಿಕ್ಕವೀರರಾಜೇಂದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ಇದ್ದರೂ, ಆಡಳಿತ ವ್ಯವಸ್ಥೆಯಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ಸಹಿಸುತ್ತಿರಲಿಲ್ಲ.
ಅವಿಭಜಿತ ಕೊಡಗು ರಾಜ್ಯದ ಪ್ರಜೆಗಳಿಗೆ ಚಿಕ್ಕವೀರರಾಜೇಂದ್ರರ ಮೇಲೆ ಇರುವ ಅಪಾರವಾದ ರಾಜಭಕ್ತಿ ಮತ್ತು ಗೌರವವನ್ನು ಗಮನಿಸಿದ, ಚಿಕವೀರರಾಜೇಂದ್ರರ ತಂಗಿ ದೇವಮ್ಮಾಜಿ ಹಾಗೂ ಪತಿ ಚೆನ್ನಬಸಪ್ಪರಿಗೆ ಅತೀವವಾದ ಅಸೂಯೆಯಾಗಿ, ಹೇಗಾದರೂ ಮಾಡಿ ಚಿಕ್ಕವೀರರಾಜನನ್ನು ಸದೆಬಡಿದು ಕೊಡಗು ರಾಜ್ಯವನ್ನು ತಮ್ಮ ಅದಿಪತ್ಯಕ್ಕೆ ಪಡೆಯಲು ಬ್ರಿಟಿಷರ ಜೊತೆ ಸೇರಿ ಪಿತೂರಿ ಮಾಡಲು ಪ್ರಾರಂಭಿಸಿದರು.
ಚಿಕ್ಕವೀರರಾಜೇಂದ್ರ ಒಡೆಯರು ಕಕ್ಕಬೆ ಸಮೀಪದ ನಾಲ್ಕುನಾಡು ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಬ್ರಿಟಿಷರ ಸೇನಾನಿ ಕರ್ನಲ್ ಫ್ರೇಜರ್ ಎಂಬುವವನು ದೇಶದ್ರೋಹಿಗಳ ಸಹಕಾರದೊಂದಿಗೆ ನಾಲ್ಕು ದಿಕ್ಕಿನಿಂದ ಕೊಡಗಿನ ಮೇಲೆ ಮುತ್ತಿಗೆ ಹಾಕುತ್ತಾನೆ. ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಮುತ್ತಿಗೆ ಹಾಕಿದ ಬ್ರಿಟಿಷರನ್ನು ಕೊಡಗಿನ ವೀರ ಸೈನಿಕರು ಹಿಮ್ಮೆಟ್ಟಿಸಿದರು. ಆದರೆ ಪೂರ್ವ ದಿಕ್ಕಿನಿಂದ ಮುತ್ತಿಗೆ ಹಾಕುತ್ತಿದ್ದ ಬ್ರಿಟಿಷರನ್ನು ಎದುರಿಸಲು ಕೊಡಗಿನ ಸೇನೆಯನ್ನು ನಿಯೋಜಿಸಲಾಗಿತ್ತು. ಆದರೆ ದಿವಾನನ ಕುತಂತ್ರದಿAದಾಗಿ ಚಿಕ್ಕವೀರ ರಾಜೇಂದ್ರ ಒಡೆಯ ಬಹಳ ಸುಲಭವಾಗಿ ಬ್ರಿಟಿಷರ ಬಂಧನಕ್ಕೆ ಒಳಗಾಗಿ, ೧೮೩೪ರಲ್ಲಿ ಬ್ರಿಟಿಷರು ಕೊಡಗನ್ನು ಆಕ್ರಮಿಸಿಕೊಂಡು, ಚಿಕ್ಕವೀರರಾಜರನ್ನು ಅಧಿಕಾರದಿಂದ ಇಳಿಸಿ ಮಡಿಕೇರಿಯ ಕೋಟೆಯಲ್ಲಿ ಗೃಹ ಬಂಧನದಲ್ಲಿರಿಸಿ, ಮಡಿಕೇರಿ ಕೋಟೆಯ ಮೇಲೆ ಬ್ರಿಟಿಷರು ಧ್ವಜವನ್ನು ಹಾರಿಸಿದರು. ಚಿಕ್ಕ ವೀರರಾಜರಿಗೆ ಅಪಾರ ಸಂಖ್ಯೆಯ ಬೆಂಬಲಿಗರಿರುವುದನ್ನು ಅರಿತ ಬ್ರಿಟಿಷರು, ಮಡಿಕೇರಿಯ ಕೋಟೆಯಲ್ಲಿ ಗೃಹ ಬಂಧನದಲ್ಲಿರಿಸಿದರೆ, ಚಿಕ್ಕವೀರರಾಜರ ಬೆಂಬಲಿಗರು ಬ್ರಿಟಿಷರ ವಿರುದ್ಧ ತಿರುಗಿ ಬಿಳುವುದನ್ನು ಮನಗಂಡ ಬ್ರಿಟಿಷರು, ಚಿಕ್ಕವೀರರಾಜನನ್ನು ಕಾಶಿಯಾತ್ರೆಯ ನೆಪದಲ್ಲಿ ಗಡಿಪಾರು ಮಾಡಿದರು. ಬ್ರಿಟಿಷರು ಎಷ್ಟೇ ಎಚ್ಚರ ವಹಿಸಿದರೂ, ರಾಜರಿಗೆ ಆಪ್ತರಾದ ಗುಡ್ಡೆಮನೆ ಅಪ್ಪಯ್ಯಗೌಡ, ಹುಲಿಕೊಂದ ನಂಜಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯ, ಪುಟ್ಟ ಬಸವರಾಜು, ಸೋಮಯ್ಯ, ಮಾಚಯ್ಯ ಮೊದಲಾದ ದೇಶ ಪ್ರೇಮಿಗಳಿಗೆ ಬ್ರಿಟಿಷರ ಸಂಚು ತಿಳಿದು ಈ ಶೂರರು ಬ್ರಿಟಿಷರ ವಿರುದ್ಧ ದಂಗೆ ಮಾಡುವ ನಿರ್ಧಾರವನ್ನು ಕೈಗೊಂಡರು.
ಪುಟ್ಟಬಸವರಾಜುರವರ ಹೆಸರನ್ನು ಕಲ್ಯಾಣ ಸ್ವಾಮಿ ಎಂದು ಬದಲಾಯಿಸಿ, ಕಾಶಿಯಾತ್ರೆಗೆ ತೆರಳಿರುವ ಚಿಕ್ಕವೀರರಾಜೇಂದ್ರ ಒಡೆಯರು ಹಿಂತಿರುಗಿ ಬರುವ ತನಕ ಕಲ್ಯಾಣ ಸ್ವಾಮಿಯವರನ್ನು ರಾಜ್ಯಪಾಲರಾಗಿ ನೇಮಿಸಿದ್ದಾರೆ ಎಂಬ ಸುದ್ದಿ ಹರಡಿಸಿದರು. ಬ್ರಿಟಿಷರ ವಿರುದ್ಧ ೧೮೩೭ರ ಏಪ್ರಿಲ್ ೬ರಂದು ಅಮರ ಸುಳ್ಯ ಯುದ್ದ ಪ್ರಾರಂಭ ಮಾಡಬೇಕೆಂದು ತೀರ್ಮಾನಿಸಿದರು.
ಕೆದಂಬಾಡಿ ರಾಮಗೌಡ, ಅಡಕ್ಕಾರು ಅಣ್ಣಿಗೌಡ ಹಾಗು ಮಾಚಯ್ಯಯವರು ಸುಳ್ಯದಲ್ಲಿ ಯುದ್ಧ ಸಿದ್ಧತೆಯನ್ನು ಮಾಡತೊಡಗಿದರು. ಗುಡ್ಡೆಮನೆ ಅಪ್ಪಯ್ಯಗೌಡ, ಮುಂತಾದವರು ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಸುತ್ತಾಡಿ ಬ್ರಿಟಿಷರ ವಿರುದ್ಧ ಯುದ್ದಕ್ಕೆ ಸಿದ್ಧತೆ ಮತ್ತು ಯುದ್ದ ಸಾಮಾಗ್ರಿಗಳ ಸಂಗ್ರಹಣೆಯಲ್ಲಿ ನಿರತರಾದರು. ಸುಳ್ಯದಲ್ಲಿ ಜಮಾವಣೆಗೊಂಡ ಸ್ವಾತಂತ್ರö್ಯ ಸಮರ ಸೇನೆ ಕೊಡಗಿನ ಕಡೆಗೆ ಪ್ರಯಾಣ ಬೆಳೆಸಿ, ಬ್ರಿಟಿಷರ ಅಧೀನದಲ್ಲಿ ದಿವಾನನಾಗಿದ್ದ ಲಕ್ಷಿö್ಮÃನಾರಾಯಣನ ಸಹೋದರ ರಾಮಪ್ಪಯ್ಯ ಸುಳ್ಯದಲ್ಲಿ ಸುಬೇದಾರ್ ನಾಗಿದ್ದುಕೊಂಡು, ಆ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ. ಹಾಗಾಗಿ ಸ್ವಾತಂತ್ರö್ಯ ಸಮರ ಸೇನೆ ರಾಮಪ್ಪಯ್ಯನ್ನು ಸೆರೆ ಹಿಡಿದು ಕೊಂದುಹಾಕಿದರು.
ಕಲ್ಯಾಣ ಸ್ವಾಮಿ, ಅಪ್ಪಯ್ಯ ಗೌಡ, ಹುಲಿಕೊಂದ ನಂಜಯ್ಯ, ಚೆಟ್ಟಿ ಕುಡಿಯ ಮೊದಲಾದವರು ಚರ್ಚಿಸಿ ೧೮೩೭ರ ಮಾರ್ಚ ೫ರಂದು ಕೊಡಗಿನ ಕೋಟೆಗೆ ಮುತ್ತಿಗೆ ಹಾಕಿ, ಬ್ರಿಟಿಷರನ್ನು ಬಗ್ಗು ಬಡಿದು, ಕೊಡಗನ್ನು ಸ್ವಾಧೀನಪಡಿಸಿಕೊಳ್ಳುವುದೆಂದು ನಿರ್ಧರಿಸಿದರು. ಈ ವಿಷಯ ಬ್ರಿಟಿಷರಿಗೆ ತಿಳಿದು ಈ ದಾಳಿಯನ್ನು ಬಗ್ಗು ಬಡಿಯಬೇಕು ಎಂದು ನಿರ್ಧರಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರö್ಯ ಸಂಗ್ರಾಮಿಗಳು ಘಟ್ಟದ ಕೆಳಗಿನ ತಳನೀರು ಕಣಿವೆಯಲ್ಲಿ ಬೀಡುಬಿಟ್ಟಿರುವ ವಿಚಾರ ಬ್ರಿಟಿಷ್ ಅಧಿಕಾರಿ ಲೀಹಾರ್ಡಿಗೆ ತಿಳಿದು ಅವರನ್ನು ದಮನ ಮಾಡಲು ಸೇನೆಯನ್ನು ಕಳುಹಿಸಿದನು.
ಮಂಗಳೂರಿನಲ್ಲಿದ್ದ ಕಲ್ಯಾಣ ಸ್ವಾಮಿಗೆ ಈ ವಿಷಯ ತಿಳಿದು ತಕ್ಷಣ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯರ ನೇತೃತ್ವದಲ್ಲಿ ಸಾಕಷ್ಟು ಸಂಖ್ಯೆಯ ಯೋಧರನ್ನು ತಳನೀರು ಕಣಿವೆಯಲ್ಲಿ ಬೀಡುಬಿಟ್ಟಿದ ಸ್ವಾತಂತ್ರö್ಯ ಯೋಧರ ಸಹಾಯಕ್ಕೆ ಕಳುಹಿಸಿಕೊಟ್ಟರು. ಕಲ್ಯಾಣ ಸ್ವಾಮಿಯ ಸೇನೆಗೂ, ಆಂಗ್ಲರ ಸೇನೆಗೂ ಭೀಕರ ಯುದ್ಧ ನಡೆಯುತ್ತದೆ. ಕೊನೆಗೆ ಕಲ್ಯಾಣಸ್ವಾಮಿಯ ದಳಪತಿಗಳಾದ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿಕಿಡಿಯ, ಕುರ್ತು ಕುಡಿಯ ಮುಂತಾದವರು ಸೆರೆಯಾಗಿ, ಮಡಿಕೇರಿ ಸೇರೆಮನೆ ಸೆರಿದರು. ಈ ವಿಷಯವನ್ನು ಅರಿತು ಅಪ್ಪಯ್ಯಗೌಡರಿಗೆ ಅಘಾತವಾಗಿ, ಆಪ್ತರೊಂದಿಗೆ ಸಮಲೋಚಿಸಿ ಬ್ರಿಟಿಷರ ಸ್ವಾಧೀನದಲ್ಲಿದ್ದ ಮಡಿಕೇರಿ ಕೋಟೆಗೆ ಮುತ್ತಿಗೆ ಹಾಕುವುದೆಂದು ತೀರ್ಮಾನ ಮಾಡಿದರು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ತಮ್ಮ ಕುದುರೆಯ ಮೂಲಕ ಸ್ವಾತಂತ್ರö್ಯ ಸಂಗ್ರಾಮದ ಬಿಡಾರದತ್ತ ತೆರಳಿದರು.ತಾವುನಾಡು ಮತ್ತು ನಾಲ್ಕುನಾಡಿನ ಸ್ವಾತಂತ್ರö್ಯ ಸಂಗ್ರಾಮದ ಅಪಾರ ಸಂಖ್ಯೆಯ ಯೋಧರೊಂದಿಗೆ,ಮಡಿಕೇರಿಯ ಉತ್ತರ ಭಾಗದಲ್ಲಿ ನಾಲ್ಕು ಮೈಲು ದೂರದಲ್ಲಿ ಬಿಡಾರ ಹೂಡಿದರು. ಶಾಂತಳ್ಳಿಯ ಮಲ್ಲಯ್ಯನ ನೇತೃತ್ವದ ಸೇನೆ ಅಪ್ಪಯ್ಯಗೌಡರ ಸೇನೆಯನ್ನು ಸೇರಿಕೊಂಡಿತು. ಈ ವಿಷಯವನ್ನು ಸ್ಥಳೀಯ ರಾಜದ್ರೋಹಿಗಳು ಲೀಹಾರ್ಡಿಗೆ ತಿಳಿಸಿದ ಪರಿಣಾಮ ಲೀಹಾರ್ಡಿಯು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಅಪ್ಪಯ್ಯಗೌಡರ ಸೇನೆಯ ಮೇಲೆ ದಾಳಿಮಾಡಿದರು.
ಗುಡ್ಡೆಮನೆ ಅಪ್ಪಯ್ಯಗೌಡರೊಂದಿಗೆ ಸೆರೆಯಾಳುಗಳಾದ ನಾಲ್ಕುನಾಡಿನ ಉತ್ತು, ಪೆರಾಜೆಯ ಪಾರುಪತ್ತೆಗಾರ ಕೃಷ್ಣಯ್ಯ, ಶಾಂತಳ್ಳಿಯ ಮಲ್ಲಯ್ಯ, ಚೆಟ್ಟಿಕುಡಿಯ ಇವರುಗಳ ವಿರುದ್ಧ ಆಂಗ್ಲರು ವಿಚಾರಣೆಯ ನಾಟಕ ಮಾಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸಿಂಗಾಪುರ ಮತ್ತು ಕಲ್ಲಿಕೊಟೆಯ ಸೆರೆಮನೆಗೆ ತಳ್ಳಿದರು. ಅಪ್ಪಯ್ಯಗೌಡರ ಸಹೋದರ ಪಾರುಪತ್ತೆಗಾರ ತಮ್ಮಯ್ಯಗೌಡರನ್ನು ಸೆರೆಹಿಡಿದು ಸಿಂಗಾಪುರ ಸೆರೆಮನೆಗೆ ತಳ್ಳಿದರು.
ಬ್ರಟಿಷರ ವಿರುದ್ಧದ ದಂಗೆಗೆ ಸೂತ್ರಧಾರಿ ಗುಡ್ಡೆಮನೆ ಅಪ್ಪಯ್ಯಗೌಡ ಎಂಬುವುದನ್ನು ತಿಳಿದ ಬ್ರಟಿಷರು, ಅಪ್ಪಯ್ಯಗೌಡರ ವಿರುದ್ಧ ವಿಶೇಷ ವಿಚಾರಣೆ ನಡೆಸಿ, ಇವರನ್ನು ಜೀವಂತವಾಗಿ ಬಿಟ್ಟರೆ ಮತ್ತೆ ಬ್ರಿಟಿಷರ ಮೇಲೆ ದಾಳಿಯನ್ನು ನಡೆಸುತ್ತಾರೆ ಎಂದು ಅರಿತು, ಬ್ರಿಟಿಷರ ನ್ಯಾಯಾಲಯ ಸಾರ್ವಜನಿಕರ ಎದುರು ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ತೀರ್ಪು ನೀಡುತ್ತದೆ. ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ೧೮೩೭ರ ಅಕ್ಟೋಬರ್ ೩೧ರಂದು ಬೆಳ್ಳಿಗೆ ೧೦ಗಂಟೆಗೆ ಮಡಿಕೇರಿ ಕೋಟೆಯ ಮುಂಭಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸುವುದೆಂದು ನಿರ್ಧರಿಸಿದರು.
ಸ್ವಾತಂತ್ರö್ಯ ಸಂಗ್ರಾಮದಲ್ಲಿ ಸೆರೆಯಾದ ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಹಾಕುವ ಸಂದರ್ಭದಲ್ಲಿ ಅವರ ಪತ್ನಿ ಮದುಮಗಳ ಉಡುಪಿನಲ್ಲಿ ಹಾಜರಿರಬೇಕು, ಅಲ್ಲದೆ ಜಿಲ್ಲೆಯ ಸಾರ್ವಜನಿಕರು, ರೈತರು, ಅಧಿಕಾರಿಗಳು, ಪಟೇಲರುಗಳು ನಿರಾಯುಧರಾಗಿ ಹಾಜರಿರಬೇಕೆಂದು ಬ್ರಿಟಿಷ್ ಅಧಿಕಾರಿ ಲೀಹಾರ್ಡಿ ಆದೇಶ ಮಾಡದರು. ಅದರಂತೆ ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಗಂಬಕ್ಕೆ ಏರಿಸಿದರು. ಕೊಡಗಿನ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಪ್ರಜ್ವಲಿಸುತ್ತಿದ್ದ ಜ್ಯೋತಿ ನಂದಿಹೋಯಿತ್ತು. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಹುತಾತ್ಮರಾಗಿ ಇಂದಿಗೆ ೧೮೪ ವರ್ಷಗಳು ಕಳೆದಿದೆ.ದೇಶದ ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿರುವ ವೀರಾಗ್ರಣಿ ಸುಬೇದಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಸಂಸ್ಮರಣೆ ಮಾಡುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ.
-ಡಾ.ದಯಾನಂದ ಕೆ.ಸಿ.
ಸದಸ್ಯರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
ಮೊಬೈಲ್ : ೯೪೪೯೭೬೬೭೭೨